ಸದ್ಯ ಕ್ರಿಕೆಟ್ ಪ್ರೇಮಿಗಳ ಕಣ್ಣು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿನ ಮೇಲಿದೆ. ಇನ್ನೇನು ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಇದೀಗ ಐಪಿಎಲ್ ಮೆಗಾ ಹರಾಜಿನ ಸಮಯ ಹೊರಬಿದ್ದಿದೆ. ಟಾಟಾ ಐಪಿಎಲ್ ಹರಾಜು, ಎರಡೂ ದಿನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಇದನ್ನು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೃಢಪಡಿಸಲಾಗಿದೆ.
ಐಪಿಎಲ್ 2022 ರಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಐಪಿಎಲ್ 15 ನೇ ಆವೃತ್ತಿಯ ಮೊದಲು, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ಐಪಿಎಲ್‌ಗೆ ಸೇರಿಕೊಂಡಿವೆ. ಹರಾಜಿಗೂ ಮುನ್ನ ಎರಡೂ ತಂಡಗಳು ಡ್ರಾಫ್ಟ್ ಮೂಲಕ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೋನಿಸ್ ಮತ್ತು ರವಿ ಬಿಷ್ಣೋಯ್ ಲಕ್ನೋ ತಂಡ ಸೇರಿದ್ದಾರೆ. ಅಹಮದಾಬಾದ್ ತಂಡ, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದೆ. ರಾಹುಲ್ ಮತ್ತು ಹಾರ್ದಿಕ್ ಕ್ರಮವಾಗಿ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳ ನಾಯಕರಾಗಿರುತ್ತಾರೆ.
ಕೆ.ಎಲ್. ರಾಹುಲ್ 17 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ 15 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಒಟ್ಟು 590 ಆಟಗಾರರು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಇವರಲ್ಲಿ 355 ಅನ್‌ಕ್ಯಾಪ್ ಆಗಿದ್ದರೆ 228 ಕ್ಯಾಪ್ಡ್ ಆಟಗಾರರು.