ಇತ್ತೀಚೆಗಷ್ಟೇ ಹೊಸ ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ)ಯ ನಾಯಕನಾಗಿ ಟೀಂ ಇಂಡಿಯಾ ಆರಂಭಿಕ ದಾಂಡಿಕ ಕೆ.ಎಲ್. ರಾಹುಲ್ ನೇಮಕವಾಗಿದ್ದು ಎಲ್ಲರಿಗೂ ತಿಳಿದದ್ದೇ. ಇದೀಗ ಕನ್ನಡಿಗ ಕೆ.ಎಲ್. ರಾಹುಲ್ ಮತ್ತೆ ಸುದ್ದಿಯಲ್ಲಿದ್ದಾರೆ. 11 ವರ್ಷದ ಬಾಲಕನ ಜೀವ ಉಳಿಸಿದ್ದಾರೆ.
ಅಪರೂಪದ ರಕ್ತದ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ಅನೀಮಿಯಾದಿಂದ ಬಳಲುತ್ತಿದ್ದ 11 ವರ್ಷದ ಬಾಲಕ ವರದ್ ಗೆ ತುರ್ತು ಮೂಳೆ ಮಜ್ಜೆಯ ಕಸಿ (ಬಿಎಂಟಿ) ಅಗತ್ಯವಿದೆ. ಇದರ ಚಿಕಿತ್ಸೆಗೆ 35 ಲಕ್ಷ ರೂ. ವೆಚ್ಚವಾಗುತ್ತದೆ. ಇದರಲ್ಲಿ 31 ಲಕ್ಷ ರೂ. ವನ್ನು ಬಾಲಕನ ಚಿಕಿತ್ಸೆಗೆ ರಾಹುಲ್ ಉದಾರವಾಗಿ ನೀಡಿದ್ದಾರೆ. ವರದ್ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ.
ಬಾಲಕ ವರದ್ ನ ಪೋಷಕರು ತಮ್ಮ ಮಗನ ಚಿಕಿತ್ಸೆಗಾಗಿ ಪಾವತಿಸಲು ಅಗತ್ಯವಿರುವ 35 ಲಕ್ಷ ರೂ. ಅನ್ನು ಸಂಗ್ರಹಿಸಲು ಗಿವ್‌ಇಂಡಿಯಾದಲ್ಲಿ ನಿಧಿಸಂಗ್ರಹಣೆ ಅಭಿಯಾನವನ್ನು ಪ್ರಾರಂಭಿಸಿದ್ದರು. ವರದ್ ಮತ್ತು ನಿಧಿಸಂಗ್ರಹದ ಬಗ್ಗೆ ತಿಳಿದ ತಕ್ಷಣ ರಾಹುಲ್ ಗಿವ್‌ಇಂಡಿಯಾದೊಂದಿಗೆ ಸಂಪರ್ಕದಲ್ಲಿದ್ದರು.
ಅಪರೂಪದ ರಕ್ತದ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ಅನೀಮಿಯಾದಿಂದ ಬಳಲುತ್ತಿದ್ದ ಬಾಲಕ ಸೆಪ್ಟೆಂಬರ್ ತಿಂಗಳಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವರದ್ ಅವರ ರಕ್ತದ ಪ್ಲೇಟ್‌ಲೆಟ್ ಮಟ್ಟಗಳು ತುಂಬಾ ಕಡಿಮೆಯಾಗಿದ್ದು, ಅವರ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳಿಗೆ ಹೆಚ್ಚು ಒಳಗಾಗಿದ್ದವು. ಸಾಮಾನ್ಯ ಜ್ವರವೂ ಗುಣವಾಗಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ವರದ್ ಸ್ಥಿತಿಗೆ ಅಸ್ಥಿಮಜ್ಜೆಯ ಕಸಿ ಮಾತ್ರ ಶಾಶ್ವತ ಚಿಕಿತ್ಸೆಯಾಗಿತ್ತು.
ವರದ್ ಪೋಷಕರು ಮಧ್ಯಮ ವರ್ಗದ ಕುಟುಂಬವಾಗಿರುವುದಿಂದ, ಹಣದ ಕೊರತೆಯನ್ನು ಎದುರಿಸಿದೆ. ಮುಂದೆ ಕ್ರಿಕೆಟಿಗನಾಗುವ ಭವ್ಯ ಕನಸು ಕಂಡಿರುವ ಬಾಲಕನಿಗೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಧನಸಹಾಯ ಮಾಡುವ ಮೂಲಕ ಆತನ ಜೀವ ಉಳಿಸಿದ್ದಾರೆ. ವರದ್ ಪೋಷಕರು ತಮ್ಮ ಮಗನ ಜೀವ ಉಳಿಸಿದ ರಾಹುಲ್ ಗೆ ಧನ್ಯವಾದ ಅರ್ಪಿಸಿದ್ದಾರೆ.