ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗಿದೆ. ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರ ಬಿದ್ದಿದ್ದಾರೆ. ಸುಂದರ್, ಗಾಯಗೊಂಡಿದ್ದು, ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯಲಿರುವ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಸುಂದರ್ ಬದಲು ಬಂಗಾಳ ಬೌಲರ್ ಆಕಾಶ್ ದೀಪ್ಗೆ ಅವಕಾಶ ಸಿಕ್ಕಿದೆ. ಆಕಾಶ್ ದೀಪ್, ಮೊದಲೇ ನೆಟ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಜುಲೈನಲ್ಲಿಯೇ ಸುಂದರ್ ಬೆರಳು ಮುರಿದಿದ್ದು, ಅವರು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು.
ಐಪಿಎಲ್ 2021ರ ಮುಂದಿನ ಪಂದ್ಯಗಳಿಗೆ ಅಲಭ್ಯವಾಗ್ತಿರುವ ಆರ್ಸಿಬಿ ಆಟಗಾರರಲ್ಲಿ ಸುಂದರ್ ಐದನೇ ಆಟಗಾರ. ಆಡಮ್ ಜಾಂಪಾ, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್ ಮತ್ತು ಫಿನ್ ಎಲೆನ್ ಈಗಾಗಲೇ ತಂಡದಿಂದ ಹೊರ ಬಿದ್ದಿದ್ದಾರೆ.
21 ವರ್ಷದ ಸುಂದರ್, ಐಪಿಎಲ್ 14ನೇ ಋತುವಿನ ಮೊದಲ ಭಾಗದಲ್ಲಿ ನಾಲ್ಕು ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಮೇ 4ರಂದು ಕೊರೊನಾ ಹಿನ್ನಲೆಯಲ್ಲಿ ಪಂದ್ಯಗಳು ರದ್ದಾಗಿದ್ದವು. ಆವರೆಗೆ ಒಟ್ಟೂ 29 ಪಂದ್ಯಗಳು ನಡೆದಿದ್ದವು. ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.