ಪೋಷಕರು ತಮಗೆ ಐಫೋನ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮನೆ ತೊರೆದಿದ್ದ ಬೆಂಗಳೂರಿನ ಇಬ್ಬರು ಬಾಲಕರು ಗೋವಾದಲ್ಲಿ ಪತ್ತೆಯಾಗಿದ್ದು, ಇದೀಗ ಪೊಲೀಸರು ಅವರನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ನಾಗಶೆಟ್ಟಿಯಲ್ಲಿ ವಾಸವಾಗಿದ್ದ ಈ ಬಾಲಕರು ಸೆಪ್ಟೆಂಬರ್ 1 ರಂದು ಮನೆ ಬಿಟ್ಟು ಹೋಗಿದ್ದರು. ಬಾಲಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಪೋಷಕರು ಬಳಿಕ ಈ ಕುರಿತಂತೆ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಆನ್ಲೈನ್ ತರಗತಿಗೆ ಹಾಜರಾಗುವ ಸಲುವಾಗಿ ಈ ಬಾಲಕರಿಗೆ ಪೋಷಕರು ಸ್ಮಾರ್ಟ್ ಫೋನ್ ಕೊಡಿಸಿದ್ದು, ಆದರೆ ತಮಗೆ ಐಫೋನ್ ಬೇಕೆಂದು ಹಠ ಹಿಡಿದಿದ್ದರು ಎನ್ನಲಾಗಿದೆ. ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ ಕೋಪಗೊಂಡು ಈ ಬಾಲಕರು ಮನೆ ತೊರೆದಿದ್ದು, ಗೋವಾಗೆ ಹೋದ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದಾಗ ಮನೆ ಬಿಟ್ಟು ಬಂದ ವಿಚಾರ ಬೆಳಕಿಗೆ ಬಂದಿತ್ತು.