ಮಾರುಕಟ್ಟೆಗೆ ಯಾವುದೇ ಕಂಪನಿಯ ಮೊಬೈಲ್‌ಗಳು ಬರಲಿ, ಎಷ್ಟೇ ಸೌಲಭ್ಯಗಳನ್ನು ನೀಡಲಿ, ಎಷ್ಟೇ ಕಡಿಮೆ ಬೆಲೆಗೆ ನೀಡಲಿ, ಆ್ಯಪಲ್ ಕಂಪನಿಯ ಐ-ಫೋನ್‌ಗಳು ಮಾತ್ರ ತನ್ನದೇ ಆದ ಗ್ರಾಹಕ ಬಳಗವನ್ನು ಹೊಂದಿವೆ. ಹಾಗಾಗಿ, ಅದು ಯಾವುದೇ ಹೊಸ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟರೂ, ಅವುಗಳನ್ನು ಕೊಂಡುಕೊಳ್ಳುವ ಜನರಿದ್ದಾರೆ. ಇಂತಹ ಐಫೋನ್ ಪ್ರಿಯರಿಗೆ ಹೊಸ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಐಫೋನ್ 14ನೇ ಮಾದರಿಯ ಹಲವು ಮೊಬೈಲ್‌ಗಳ ಫೀಚರ್‌ಗಳ ಕುರಿತು ಮಾಹಿತಿ ಸೋರಿಕೆಯಾಗಿದ್ದು, ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಐಫೋನ್ 14, ಐಫೋನ್ 14 ಮ್ಯಾಕ್ಸ್, ಐಫೋನ್ 14 ಪ್ರೊ ಹಾಗೂ ಐಫೋನ್ ಪ್ರೊ ಮ್ಯಾಕ್ಸ್ ಸರಣಿಯ ಫೀಚರ್‌ಗಳ ಮಾಹಿತಿ ಸೋರಿಕೆಯಾಗಿದೆ. ಹೀಗೆ ಸೋರಿಕೆಯಾದ ಮಾಹಿತಿ ಪ್ರಕಾರ ಐಫೋನ್ 14 ಹಾಗೂ ಐಫೋನ್ 14 ಮ್ಯಾಕ್ಸ್ ಮೊಬೈಲ್‌ಗಳು ಐಪೋನ್ 13 ಚಿಪ್‌ಸೆಟ್ ಅನ್ನೇ ಹೊಂದಿರಲಿದೆ ಎಂದು ತಿಳಿದುಬಂದಿದೆ.
ರಷ್ಯಾದಲ್ಲಿ ಆಪಲ್ ಸೇವೆ ನಿರ್ಬಂಧಿಸುವಂತೆ ಟಿಮ್ ಕುಕ್ ಗೆ ಮನವಿ
ಎಂದಿನಂತೆ ಕಂಪನಿಯು ಹಲವು ಹೊಸ ಫೀಚರ್‌ಗಳನ್ನು ಸೇರಿಸಿದೆ. ಐಫೋನ್ 14 ಹಾಗೂ ಐಫೋನ್ 14 ಮ್ಯಾಕ್ಸ್ ಮೊಬೈಲ್‌ಗಳು ಎ15 ಬಯೋನಿಕ್ ಪ್ರೊಸೆಸರ್ ಹೊಂದಿರಲಿವೆ. ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್‌ಗಳು ಎ16 ಚಿಪ್ ಸೆಟ್ ಹೊಂದಿರಲಿವೆ. ನಾಲ್ಕೂ ಮಾದರಿಯ ಮೊಬೈಲ್‌ಗಳಲ್ಲಿ ಆರು ಜಿಬಿ ರ್ಯಾಮ್ ಇರಲಿದೆ. ಐಫೋನ್ 14 ಹಾಗೂ ಐಫೋನ್ 14 ಮ್ಯಾಕ್ಸ್ ಮೊಬೈಲ್‌ಗಳು 6.1 ಇಂಚಿನ ಸ್ಕ್ರೀನ್ ಹೊಂದಿದ್ದರೆ, ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್‌ಗಳು 6.7 ಇಂಚಿನ ಸ್ಕ್ರೀನ್ ಹೊಂದಿರಲಿವೆ. ಆದರೆ, ಹೊಸ ಮೊಬೈಲ್ ಬೆಲೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.