ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆ ಮುಟ್ಟಿವೆ. ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್ಗೆ 100 ರೂ. ಗಿಂತ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆ ಮತ್ತು ಅಗತ್ಯತೆಯ ಸುಳಿಯಲ್ಲಿ ದೇಶದ ಜನರು ಸಿಕ್ಕಿ ಹಾಕಿಕೊಂಡಿದ್ದರು. ಇದರ ಮಧ್ಯೆ ಇಂದಿನಿಂದ ಪೆಟ್ರೋಲ್ – ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಸಹ ಮತ್ತೆ ಏರಬಹುದೆಂಬ ಆತಂಕವೂ ಕಾಡುತ್ತಿದೆ.
ಈ ನಡುವೆ ಪರ್ಯಾಯ ಇಂಧನದ ಹುಡುಕಾಟ ತೀವ್ರಗೊಂಡಿದೆ. ಸದ್ಯದ ಮಟ್ಟಿಗೆ ದ್ವಿಚಕ್ರ ವಾಹನಗಳಾದ ಸ್ಕೂಟರ್ಗಳು ಮತ್ತು ಖಾಸಗಿ ಬಳಕೆ ಕಾರುಗಳಿಗೆ ಪರ್ಯಾಯ ಇಂಧನವಾಗಿ ಸಾಬೀತಾಗಿರುವುದು ’ಎಲೆಕ್ಟ್ರಿಕ್ ಚಾರ್ಜಿಂಗ್ ಅಥವಾ ಲೀಥಿಯಮ್ ಐಯಾನ್ ಬ್ಯಾಟರಿಗಳು’ ಮಾತ್ರವೇ.
ಈ ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆ ಹೆಚ್ಚಿಸಲು ಸ್ವತಃ ಕೇಂದ್ರ ಸರ್ಕಾರ ಕೂಡ ಸಹಾಯಧನ ಘೋಷಿಸಿದೆ. ಹಲವಾರು ರೀತಿಯ ತೆರಿಗೆ ವಿನಾಯಿತಿಯನ್ನು ಇವಿ ಖರೀದಿ ಮಾಡುವವರಿಗೆ ನೀಡಲಾಗುತ್ತಿದೆ. ಇದೇ ನಿಟ್ಟಿನಲ್ಲಿ ದೇಶದ ಅತ್ಯಂತ ದೊಡ್ಡ ತೈಲ ಉತ್ಪಾದನೆ ಮತ್ತು ಪೂರೈಕೆ ಸಂಸ್ಥೆ ಎನಿಸಿರುವ ’ ಇಂಡಿಯನ್ ಆಯಿಲ್ ಕಾರ್ಪೊರೇಷನ್ ’ (ಐಒಸಿ) ಕೂಡ ಹೆಜ್ಜೆ ಇರಿಸಿದೆ. ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 10 ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸಂಸ್ಥೆ ಮುಂದಾಗಿದೆ.
ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಬೆಳ್ಳಿ 898 ರೂ., ಚಿನ್ನದ ದರ 375 ರೂ. ಇಳಿಕೆ
ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2070ರ ವೇಳೆಗೆ ದೇಶವು ಇಂಗಾಲ ಹೊರಸೂಸುವಿಕೆಯನ್ನು (ಕಾರ್ಬನ್ ಎಮಿಷನ್) ಶೂನ್ಯಗೊಳಿಸುವ ಮಹತ್ವದ ಘೋಷಣೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಬೇಕಿದೆ. ಅದು ಹೆಚ್ಚಾದಲ್ಲಿ ಪೆಟ್ರೋಲ್ ಬಂಕ್ಗಳಂತೆ ’ಇವಿ ಚಾರ್ಜಿಂಗ್ ಕೇಂದ್ರಗಳಿಗೆ ಭಾರಿ ಬೇಡಿಕೆ ನಿರ್ಮಾಣವಾಗಲಿದೆ’ ಎಂದು ಐಒಸಿ ಮುಖ್ಯಸ್ಥ ಶ್ರೀಕಾಂತ್ ಮಾಧವ್ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಪ್ರತಿ 100 ಕಿ.ಮೀ ದೂರದಲ್ಲಿ 100 ಕಿ.ವ್ಯಾಟ್ ಸಾಮರ್ಥ್ಯದ ಹೆವಿ-ಡ್ಯೂಟಿ ಚಾರ್ಜರ್ಗಳು ಸ್ಥಾಪನೆಗೊಳ್ಳಲಿವೆ. ಅದೇ ರೀತಿ ಪ್ರತಿ 25 ಕಿ.ಮೀ ದೂರದಲ್ಲಿ 50 ಕಿ.ವ್ಯಾಟ್ ಸಾಮರ್ಥ್ಯದ ಚಾರ್ಜಿಂಗ್ ಕೇಂದ್ರವು ಸ್ಥಾಪನೆಗೊಳ್ಳಲಿದೆ. ಇದಲ್ಲದೇ ಹೊಸ ಪೆಟ್ರೋಲ್ ಪಂಪ್ಗಳಲ್ಲಿ ಕೂಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.