ಕಾರವಾರ: ಪೊಲೀಸ್ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಮಾರುತಿ ನಾಯ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.
ಹಿಂದೂ ಧರ್ಮ ಅವಹೇಳನ ಸಂಬಂಧ ಶಿರವಾಡದ ಮಾರುತಿ ನಾಯ್ಕ ದೂರು ದಾಖಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ಕುಸುಮಾದರ, ಸಬ್ ಇನ್ಸ್ ಪೆಕ್ಟರ್ ಶಾಂತಿನಾಥ, ಕಾನ್ಸ್ ಟೇಬಲ್ ದೇವರಾಜ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ವಿಷ್ಣುವರ್ಧನ ಅಮಾನತು ಮಾಡಿದ್ದಾರೆ.
ಪ್ರಕರಣದ ತನಿಖೆಯನ್ನು ಭಟ್ಕಳ ಡಿ.ವೈ.ಎಸ್.ಪಿ.ಗೆ ವಹಿಸಲಾಗಿದೆ. ಪ್ರಕರಣದಲ್ಲಿ ಗಂಭೀರ ಆರೋಪಕ್ಕೆ ಒಳಗಾಗಿ ಜಾಮಿನಿನ ಮೇಲೆ ಬಿಡುಗಡೆಯಾಗಿದ್ದ ದಲಿತ ಮುಖಂಡ ಎಲಿಷಾ ಎಲಕಪಾಟಿ, ಬಸವರಾಜ ಹಾಗೂ ಸುರೇಶ ಅವರನ್ನು ಬುಧವಾರ ರಾತ್ರಿ ಮತ್ತೆ ಬಂಧಿಸಲಾಗಿದೆ.
ಎಲಿಷಾ ಎಲಕಪಾಟಿ ಹಿಂದೂ ದೇವರ ಅವಹೇಳನ ಮಾಡಿ ಮಾತನಾಡಿದ್ದಾರೆ ಎಂದು ಮಾರುತಿ ನಾಯ್ಕ್ ದೂರು ದಾಖಲಿಸಿದ್ದರು. ಇತ್ತೀಚೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಕಾರಣೆ ಎಂದು ದಲಿತ ಮುಖಂಡ ಎಲಿಷಾ ಎಲಕಪಾಟಿ ಮತ್ತು ಪೊಲೀಸರು ಸೇರಿ ಕೆಲವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿದ್ದರು.