ಶಿವಮೊಗ್ಗ: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ನಿರ್ದಿಷ್ಟವಾಗಿ ಸಚಿವರ ಹೆಸರು ಬರೆದಿಲ್ಲ. ಹೀಗಾಗಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರು ಇತ್ತು. ಇಲ್ಲಿ ಸಚಿವರ ಹೆಸರಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಕೆಲಸ ಮಾಡುತ್ತವೆ. ತನಿಖಾ ಸಂಸ್ಥೆಗಳನ್ನು ಎಲ್ಲರೂ ನಂಬಬೇಕು. ಸಿಬಿಐ ಮೇಲೆಯೂ ಪ್ರಭಾವ ಬೀರಬಹುದು ಎಂದು ನಾನು ಹೇಳುತ್ತೇನೆ. ತನಿಖೆ ಸಿಬಿಐಗೆ ವಹಿಸಬೇಕೆ, ಬೇಡವೇ ಎಂದು ಸರ್ಕಾರ ನಿರ್ಧರಿಸುತ್ತದೆ. ಬಿಜೆಪಿಯವರನ್ನು ಕೇಳಿ ನಾವು ಅಧಿಕಾರ ನಡೆಸಬೇಕಾ ಎಂದು ಪ್ರಶ್ನಿಸಿದ್ದಾರೆ.