
ಬೆಂಗಳೂರು: ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮುಕ್ತಾಯಗೊಂಡಿದ್ದು, ರಾಜ್ಯಕ್ಕೆ ₹ 10.27 ಲಕ್ಷ ಕೋಟಿ ಬಂಡವಾಳ ಹರಿದುಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ. ಬಿ ಪಾಟೀಲ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇನ್ ವೆಸ್ಟ್ ಕರ್ನಾಟಕ ಸಮಾವೇಶದಿಂದ ನಾವು ರಾಜ್ಯಕ್ಕೆ ₹ 10 ಲಕ್ಷ ಕೋಟಿ ಬಂಡವಾಳ ಹರಿದುಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ₹ 10.27 ಲಕ್ಷ ಕೋಟಿ ಬಂಡವಾಳ ಹರಿದುಬಂದಿದೆ. ₹ 4.30 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಅಂತಿಮವಾಗಿದ್ದು, ₹ 6.23 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆಯಷ್ಟು ಒಡಂಬಡಿಕೆಯಾಗಿದೆ. ಈ ಉದ್ಯಮಿಗಳಿಗೆ ಅಗತ್ಯವಿರುವ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಕರ್ನಾಟಕ ಇತಿಹಾಸ ದೇಶಕ್ಕೆ ಮಾದರಿ. 2000ನೇ ಇಸವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ದೇಶದ ಮೊದಲ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ಇನ್ಫೋಸಿಸ್ ನಾರಾಯಣಮೂರ್ತಿ ಅವರು ಇದನ್ನು ಉದ್ಘಾಟಿಸಿದ್ದರು. ನಂತರ ನಿರಂತರವಾಗಿ 2-3 ವರ್ಷ ಈ ಸಮಾವೇಶ ಮಾಡಿದ್ದೆವು. ಇದುವರೆಗೂ ಮಾಡಿರುವ ಸಮಾವೇಶಗಳ ಪೈಕಿ ಕೆಲವು ಯಶಸ್ವಿವಾದರೆ, ಮತ್ತೆ ಕೆಲವು ವಿಫಲವಾಗಿವೆ. ಅನೇಕ ರಾಷ್ಟ್ರಗಳ ರಾಜಕಕೀಯ ಹಾಗೂ ಕೈಗಾರಿಕಾ ನಾಯಕರು ಈ ಸಮಾವೇಶಕ್ಕೆ ಬಂದಿದ್ದಾರೆ. ಎಲ್ಲರೂ ಕರ್ನಾಟಕ ರಾಜ್ಯದಲ್ಲಿರುವ ವಾತಾವರಣ, ಏಕಗವಾಕ್ಷಿ ವ್ಯವಸ್ಥೆ, ಪರಿಸರ, ಮಾನವ ಸಂಪನ್ಮೂಲ, ಪ್ರತಿಭೆ, ಜ್ಞಾನ, ಆರೋಗ್ಯ ಸೌಲಭ್ಯ, ಶಿಕ್ಷಣ ಎಲ್ಲವೂ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂಬುದನ್ನು ಅರಿತಿದ್ದಾರೆ ಎಂದರು.
ಬೆಂಗಳೂರಿನ ಜನಸಂಖ್ಯೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನಮ್ಮ ನೂತನ ಕೈಗಾರಿಕಾ ನೀತಿ ರೂಪಿಸಲಾಗಿದೆ. ಬೆಂಗಳೂರಿನ ಜನಸಂಖ್ಯೆ 1.40 ಕೋಟಿಗೆ ಏರಿಕೆಯಾಗಿದ್ದು, ವಾಹನಗಳ ಸಂಖ್ಯೆ 1.10 ಕೋಟಿಯಷ್ಟಾಗಿದೆ. ಇದನ್ನು ನಿಯಂತ್ರಿಣ ಮಾಡುವ ಉದ್ದೇಶದಿಂದ ಎಂ.ಬಿ ಪಾಟೀಲ್ ಹಾಗೂ ಅವರ ತಂಡ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಕೈಗಾರಿಕೆಗಳನ್ನು ಬೆಂಗಳೂರಿನ ಹೊರಗೆ ಸ್ಥಾಪಿಸಲು ಪ್ರೋತ್ಸಾಹ ನೀಡಲು ಮುಂದಾಗಿದ್ದೇವೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಭೂಮಿಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನ ಹೊರಗೆ ಉದ್ಯಮ ಆರಂಭಿಸಲು ಸುಮಾರು ಶೇ.75ರಷ್ಟು ಉದ್ಯಮಿಗಳು, ತಂತ್ರಜ್ಞರು ಒಪ್ಪಿದ್ದಾರೆ ಎಂದು ತಿಳಿಸಿದರು.
ನಂಜುಡಪ್ಪ ವರದಿ ಆಧಾರದ ಮೇಲೆ ಬಂಡವಾಳ ಹೂಡಿಕೆಯಲ್ಲಿ ಪ್ರೋತ್ಸಾಹ ಧನ, ಕಾರ್ಯಕ್ಷಮತೆ ಆಧಾರದ ಮೇಲೂ ಆರ್ಥಿಕ ನೆರವು ನೀಡಲು ಮುಂದಾಗಿದ್ದೇವೆ. ಜತೆಗೆ ಅವರಿಗೆ ಭೂಮಿ ಒದಗಿಸಲು ಮುಂದಾಗಿದ್ದೇವೆ. ಇನ್ನು ಮಹಿಳೆಯರಿಗೆ ಆದ್ಯತೆ ನೀಡಲು ಶೇ.5ರಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಇನ್ನು ಹಸಿರು ಇಂಧನ ಮೂಲಕ ಸಂಸ್ಥೆ ರೂಪಿಸುವವರಿಗೆ ಶೇ.5ರಷ್ಟು ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ. ವಿದ್ಯುತ್ ಚಾಲಿತ ವಾಹನಕ್ಕಾಗಿ ಸ್ವಚ್ಛ ಸಂಚಾರ ನೀತಿ ಬಿಡುಗಡೆ ಮಾಡಿದ್ದೇವೆ. ಪ್ರವಾಸೋದ್ಯಮ ನೀತಿ ಮೂಲಕ ಒತ್ತು ನೀಡಿದ್ದೇವೆ. ಐಟಿ ಬಿಟಿ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಫಾಕ್ಸ್ ಕಾನ್ ಸಂಸ್ಥೆಯವರು ದೊಡ್ಡಬಳ್ಳಾಪುರದ ಬಳಿ ತಮ್ಮ ಕಂಪನಿ ಆರಂಭಿಸಲಿದ್ದು, 40 ಸಾವಿರ ಜನರಿಗೆ ಉದ್ಯೋಗ ನೀಡಲಿದ್ದಾರೆ ಎಂದು ಹೇಳಿದರು.
ಏರ್ ಶೋಗೆ ಆಗಮಿಸಿದ್ದ ಅನೇಕ ಉದ್ಯಮಿಗಳು ಈ ಸಮಾವೇಶಕ್ಕೂ ಆಗಮಿಸಿದ್ದರು. ನಮ್ಮಲ್ಲಿ ದೊಡ್ಡ ವಿಮಾನಗಳನ್ನು ತಯಾರು ಮಾಡದಿದ್ದರೂ ಶೇ.50ರಷ್ಟು ಬಿಡಿಭಾಗಗಳ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ. ದೇಶದ ಏರೋಸ್ಪೇಸ್ ಹಾಗೂ ರಕ್ಷಣಾ ವಿಭಾಗಕ್ಕೆ ನೀಡುವ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಶೇ.65ರಷ್ಟಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಶ್ ಗೋಯೆಲ್ ಅವರು ಕರ್ನಾಟಕ ರಾಜ್ಯದ ಸಂಸ್ಕೃತಿ, ಮಾನವ ಸಂಪನ್ಮೂಲ, ಜ್ಞಾನಕ್ಕೆ ಸರಿಸಮನಾದ ಮತ್ತೊಂದು ರಾಜ್ಯ ಮತ್ತೊಂದಿಲ್ಲ ಎಂದು ಅವರೇ ಒಪ್ಪಿದ್ದಾರೆ ಎಂದು ತಿಳಿಸಿದರು.
ನಮ್ಮ ಪರಂಪರೆಯಿಂದ ನಾವು ಈ ಸಾಧನೆ ಮಾಡಿದ್ದೇವೆ. ನೆಹರೂ ಅವರ ಕಾಲದಲ್ಲಿ ಹಾಕಿದ ಅಡಿಪಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಎಸ್ ಎಂಇಗಳಿಗಾಗಿ ನಾವು ಪೋರ್ಟಲ್ ಆರಂಭಿಸಿದ್ದು, ಉತ್ಪಾದಕರು ಹಾಗೂ ಗ್ರಾಹಕರಿಗೆ ವೇದಿಕೆ ಸಿದ್ಧಪಡಿಸಿದ್ದೇವೆ. ಇಂತಹ ಕಾರ್ಯಕ್ರಮ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ನಮ್ಮ ಏಕಗವಾಕ್ಷಿ ವ್ಯವಸ್ಥೆ ಮತ್ತಷ್ಟು ಸುಧಾರಿಸುವತ್ತ ಗಮನಹರಿಸಿದ್ದೇವೆ. ಬಂಡವಾಳ ಹೂಡಿಕೆ ಹೆಚ್ಚಾದಷ್ಟು ಉದ್ಯೋಗ ಸೃಷ್ಟಿ ಹೆಚ್ಚುತ್ತದೆ, ತೆರಿಗೆ ಹೆಚ್ಚು ಸಂಗ್ರಹವಾಗುತ್ತದೆ ಎಂದರು.