ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ಹೂಡಿಕೆದಾರರನ್ನು ಆಕರ್ಷಿಸಲು 2025ರ ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಿದ್ದು, ಪೂರ್ವ ಸಿದ್ಧತೆಗಾಗಿ ಈಗಾಗಲೇ 75 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರೊಂದಿಗೆ 15 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ತೀರ್ಮಾನಿಸಿದ್ದು, 90 ಕೋಟಿ ರೂ. ವೆಚ್ಚದಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗಾಗಿ ನಾಲೆಡ್ಜ್ ಪಾರ್ಟ್ನರ್ ಆಯ್ಕೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಟೆಂಡರ್ ಕರೆದಿದ್ದು, ಇದರಲ್ಲಿ ಭಾಗಿಯಾಗಿದ್ದ ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈ.ಲಿ. ಅನ್ನು 21 ಕೋಟಿ ರೂ. ವೆಚ್ಚದಲ್ಲಿ ನೇಮಕ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.