ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲ ಸಲ್ಲದ ಕಟ್ಟು ಕತೆ ಕಟ್ಟಿದ್ದ ಆರೋಪಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಡಿಆರ್, ಟವರ್ ಡಂಪ್, ಮೊಬೈಲ್ ಸೇರಿ ಸಾಕ್ಷ್ಯಗಳ ಕಲೆ ಹಾಕಿರುವ ಪೊಲೀಸರು ಮಾಹಿತಿ ಆಧರಿಸಿ ಕೊಲೆ ಆರೋಪಿಗಳ ವಿಚಾರಣೆ ನಡೆಸಿದ್ದು, ಆರೋಪಿಗಳೇ ಮರೆತಿದ್ದ ಸಮಯಗಳ ಬಗ್ಗೆ ನಿಖರ ಮಾಹಿತಿ ನೀಡಿ ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ಇದರಿಂದಾಗಿ ಕಂಗಾಲಾಗಿರುವ ಆರೋಪಿಗಳು ಪೊಲೀಸರ ವಿಚಾರಣೆಗೆ ಬೇಸ್ತು ಬಿದ್ದಿದ್ದಾರೆ. ಪೊಲೀಸ್ ಕಸ್ಟಡಿ ಅಂತ್ಯಗೊಳ್ಳಲು ಎರಡು ದಿನ ಮಾತ್ರ ಬಾಕಿ ಉಳಿದ ಹಿನ್ನೆಲೆಯಲ್ಲಿ ಆರೋಪಿಗಳ ವಿಚಾರಣೆ ತೀವ್ರಗೊಳಿಸಿರುವ ತನಿಖಾಧಿಕಾರಿಗಳು ಆರೋಪಿಗಳನ್ನು ಪ್ರತ್ಯೇಕ ವಿಚಾರಣೆಗೆ ಒಳಪಡಿಸಿದ್ದಾರೆ. ಅನೇಕ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು, ಇಂದು ಆರೋಪಿಗಳ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಹಿಂದಿನ ಹೇಳಿಕೆ ಆಧರಿಸಿ ಇಂದು ಮತ್ತಷ್ಟು ವಿಚಾರಣೆ ನಡೆಸಲಾಗುವುದು ಎನ್ನಲಾಗಿದೆ.