ಇಲ್ಲೊಬ್ಬ ಮಹಿಳೆ ಇದ್ದಕ್ಕಿದ್ದಂತೆ ಇಂಟರ್ನೆಟ್ ನಲ್ಲಿ ಅತ್ಯಂತ ಜನಪ್ರಿಯಳಾಗಿದ್ದಾಳೆ. ಈ ಜನಪ್ರಿಯತೆ ಗಳಿಸಲು ಆಕೆ ಮಾಡಿದ ಕೆಲಸವಾದರೂ ಏನು? ತಾನು ಸಾಕಿದ್ದ ಬಾತುಕೋಳಿಯನ್ನು ಹದ್ದಿನ ದಾಳಿಯಿಂದ ರಕ್ಷಣೆ ಮಾಡಿರುವುದು.
ಇದರಲ್ಲೇನು ವಿಶೇಷವಿದೆ? ಇಷ್ಟಕ್ಕೆಲ್ಲಾ ಜನಪ್ರಿಯತೆ ಗಳಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ಈಕೆ ಅಂತಹ ಸಾಧನೆಯನ್ನೇ ಮಾಡಿದ್ದಾರೆ. ಈಕೆ ಬಾಣಂತಿ.
ಮನೆಯಲ್ಲಿ ಪುಟಾಣಿ ಮಗುವಿಗೆ ಹಾಲುಣಿಸುವಾಗ ಹದ್ದೊಂದು ಬಂದು ಆವರಣದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಿ ಅದನ್ನು ಕಚ್ಚಿಕೊಂಡು ಹೋಗುತ್ತಿದ್ದ ಕ್ಷಣದಲ್ಲಿ ಕೈಲಿ ಮಗುವನ್ನಿಟ್ಟುಕೊಂಡೇ ಬಂದು ಹದ್ದನ್ನು ಓಡಿಸಿದ್ದಾರೆ.
ಉತ್ತರ ಸ್ಯಾನಿಚ್ ನಲ್ಲಿ ಈ ಘಟನೆ ನಡೆದಿದೆ. ಮಗುವಿಗೆ ಮೊಲೆ ಹಾಲು ಕುಡಿಸುತ್ತಿದ್ದ ಓಕ್ಲಿ ಎಂಬ ಮಹಿಳೆಯು ತನ್ನ ನೆಚ್ಚಿನ ಬಾತುಕೋಳಿಯನ್ನು ಹದ್ದು ಹೊತ್ತೊಯ್ಯುತ್ತಿರುವುದನ್ನು ಗಮನಿಸಿದ್ದಾಳೆ. ಕೂಡಲೇ ತನ್ನ ಕಂಕುಳಲ್ಲಿ ಮಗುವನ್ನಿಟ್ಟುಕೊಂಡೇ ಹೊರಗೆ ಓಡೋಡಿ ಬಂದವಳೇ ಹದ್ದನ್ನು ಬೆದರಿಸಿ ಓಡಿಸಿದ್ದಾಳೆ. ತನ್ನ ನೆಚ್ಚಿನ ಬಾತುಕೋಳಿಯನ್ನು ರಕ್ಷಿಸಿದ್ದಾಳೆ.
ಈ ದೃಶ್ಯಗಳು ಓಕ್ಲೇ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈಕೆಯ ಪತಿ ಈ ದೃಶ್ಯಗಳನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಧೈರ್ಯದ ವಿಡಿಯೋವನ್ನು ಮಿಲಿಯನ್ ಗಟ್ಟಲೆ ವೀಕ್ಷಕರು ನೋಡಿದ್ದಾರೆ.