ವಾಷಿಂಗ್ಟನ್: ಯುಟ್ಯೂಬ್ ನಲ್ಲಿ 40 ಮಿಲಿಯನ್ ಚಂದಾದಾರನ್ನು ಗಳಿಸಿದ್ದಕ್ಕೆ ಅಮೆರಿಕಾದ ಪ್ರಸಿದ್ಧ ಯುಟ್ಯೂಬರ್ 40 ಕಾರುಗಳನ್ನು ಹಂಚಿ ಅಚ್ಚರಿ ಮೂಡಿಸಿದ್ದಾರೆ. ಮಿಸ್ಟರ್ ಬೀಸ್ಟ್ ಎಂಬ ಯು ಟ್ಯೂಬ್ ಚಾನಲ್ ಹೊಂದಿರುವ ಜಿಮ್ಮಿ ಡೊನಾಲ್ಡ್ ಸನ್ ಇಂಥ ದಾನಶೂರ ಕಾರ್ಯಕ್ಕೆ ಪ್ರಸಿದ್ಧರಾಗಿದ್ದಾರೆ.
ಜಿಮ್ಮಿ ಒಮ್ಮೆ ಡೀಲರ್ ಒಬ್ಬರ ಬಳಿ ಇದ್ದ ಎಲ್ಲ ಕಾರುಗಳನ್ನು ಖರೀದಿಸಿದ್ದರು. ಇನ್ನೊಮ್ಮೆ ಹೋಟೆಲ್ ವೇಟರ್ ಗೆ ಸಾವಿರ ಡಾಲರ್ ಟಿಪ್ಸ್ ಕೊಟ್ಟಿದ್ದರು. ಮತ್ತೊಮ್ಮೆ ನಾಯಿ ಸಾಕಾಣಿಕಾ ಕೇಂದ್ರದ ಎಲ್ಲ ನಾಯಿಗಳನ್ನೂ ದತ್ತು ಪಡೆದಿದ್ದರು. ಅಪರಿಚಿತರಿಗೆ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಹಣ ಹಾಕಿದ್ದರು. 20 ಲಕ್ಷ ಗಿಡ ನೆಟ್ಟಿದ್ದರು. ಐದು ಕೋಟಿ ಬೆಲೆ ಬಾಳುವ ದ್ವೀಪವೊಂದನ್ನು ಖರೀದಿಸಿ ತಮ್ಮ ಸ್ನೇಹಿತನಿಗೆ ಕೊಡುಗೆಯಾಗಿ ನೀಡಿದ್ದರು. ಇಂಥ ಲೆಕ್ಕವಿಲ್ಲದಷ್ಟು ಜನೋಪಕಾರಿ ಕಾರ್ಯ ಮಾಡಿ ಅದರಿಂದಲೇ ಅವರು ಪ್ರಸಿದ್ಧರಾಗಿದ್ದಾರೆ.
ಈಗ ಅವರ ದಾನಶೂರ ಕಾರ್ಯಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. 40 ವಿವಿಧ ಮಾಡೆಲ್ ಕಾರು ಖರೀದಿಸಿದ ಜಿಮ್ಮಿ ಅವರು ಅವುಗಳೊಟ್ಟಿಗೆ ತಮ್ಮ40 ನೇ ಲಕ್ಷದ ಚಂದಾದಾರ ಲೂಕ್ ಅವರ ಮನೆಗೆ ತೆರಳಿ ಅವರಿಗೊಂದು ಟಾಸ್ಕ್ ನೀಡಿದ್ದರು. 24 ಗಂಟೆಯಲ್ಲಿ ಅವುಗಳನ್ನು ಹಂಚುವಂತೆ ಸೂಚಿಸಿದ್ದರು. ಲೂಕ್ ಎಲ್ಲ 40 ಕಾರುಗಳನ್ನು 19 ತಾಸಿನಲ್ಲಿ ತಮ್ಮ ಮನೆಯವರು, ಸ್ನೇಹಿತರು, ಹೋಟೆಲ್ ಉದ್ಯೋಗಿ ಸೇರಿ ಹಲವರಿಗೆ ಹಂಚಿ ಮುಗಿಸಿ ಯು ಟ್ಯೂಬರ್ ಜಿಮ್ಮಿ ಅವರಿಂದ ಐಶಾರಾಮಿ ಕಾರೊಂದನ್ನು ಕೊಡುಗೆಯಾಗಿ ಪಡೆದಿದ್ದಾರೆ.