ನೀವೊಂದು ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ ? ಅದರಲ್ಲಿ ಕೊರೊನಾ ಸೋಂಕಿತರೂ ಇದ್ದರೆ, ಸೋಂಕು ಹರಡುವ ಪ್ರಮಾಣ ಎಷ್ಟು ಗೊತ್ತೆ ?
ಯುರೋಪ್ ನ ಸೌತಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಚೀನಾದ ವಿಜ್ಞಾನ ಸಂಸ್ಥೆ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನ ವರದಿಯು ಕುತೂಹಲಕಾರಿ ಮಾಹಿತಿಯನ್ನು ಹೊರಗೆಡವಿದೆ.
2019 ರ ಡಿಸೆಂಬರ್ 19 ರಿಂದ 2020 ಮಾರ್ಚ್ 6 ರವರೆಗೆ ಚೀನಾದ ರೈಲುಗಳಲ್ಲಿ ಪ್ರಯಾಣಿಕರ ಅಧ್ಯಯನ ನಡೆಸಿದ್ದು, ಸೋಂಕಿತರು ಹಾಗೂ ಕೊರೋನಾ ಲಕ್ಷಣವುಳ್ಳ 2,334 ಮಂದಿಯೊಂದಿಗೆ ಪ್ರಯಾಣಿಸಿದ್ದ 72,093 ಪ್ರಯಾಣಿಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಅಂತರ ಕಾಯ್ದುಕೊಂಡು, ಮುಖಕವಚ ಧರಿಸಿಯೇ ಪ್ರಯಾಣಿಸಿದ ಸೋಂಕಿತರಿಂದ ಸೋಂಕು ಹರಡುವ ಪ್ರಮಾಣ ಶೇ.0 ರಿಂದ ಶೇ.10.3 ರಷ್ಟಿದೆ. ಈ ಪ್ರಮಾಣ ಸರಾಸರಿ ಶೇ.0.32 ರಷ್ಟಿದೆ. ಮಹತ್ವದ ಸಂಗತಿಯೆಂದರೆ ಎದುರಾಎದುರಾ ಕುಳಿತಿದ್ದ ಪ್ರಯಾಣಿಕರಿಗೆ ಸೋಂಕು ತಗುಲುವ ಪ್ರಮಾಣ ಅತಿ ಹೆಚ್ಚು ಅಂದರೆ ಶೇ.3.5 ರಷ್ಟಿದೆ. ಒಂದೇ ಬದಿಯಲ್ಲಿ ಅಂತರ ಕಾಯ್ದುಕೊಂಡು ಕುಳಿತ ಪ್ರಯಾಣಿಕರಿಗೆ ಸೋಂಕು ತಗುಲುವ ಪ್ರಮಾಣ ಶೇ.1.5 ರಷ್ಟು ಎಂದು ಹೇಳಲಾಗಿದೆ. ಮತ್ತೊಂದು ಕುತೂಹಲಕಾರಿ ಮಾಹಿತಿಯೆಂದರೆ ಸೋಂಕಿತ ಪ್ರಯಾಣಿಸಿದ್ದ ಸೀಟಿನಲ್ಲಿ ಕುಳಿತ ಸೋಂಕಿಲ್ಲದ ವ್ಯಕ್ತಿಗೆ ಸೋಂಕು ತಗುಲುವ ಪ್ರಮಾಣ ಕೇವಲ ಶೇ.0.075 ರಷ್ಟು ಎಂದು ಅಧ್ಯಯನ ಹೇಳಿದೆ.