ಬಾವುಲಿಗಳ ಕಡಿತದಿಂದ ತಮಗೂ ಸಹ ಕೋವಿಡ್-19 ಸೋಂಕು ತಗುಲಿರಬಹುದೆಂದು ವೈರಾಣುಗಳು ಪತ್ತೆಯಾದ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೋನಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು ಎಂದು ಹೇಳಲಾದ ನವೆಂಬರ್ 2019ಕ್ಕಿಂತ ಎರಡು ವರ್ಷಗಳ ಹಿಂದಿನ ವಿಡಿಯೋವೊಂದು ಬಿಡುಗಡೆಯಾಗಿದೆ. ವುಹಾನ್ ವೈರಾಣು ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಜೀವಂತ ವೈರಸ್‌ಗಳ ಮೇಲೆ ಕೆಲಸ ಮಾಡುವಾಗ ಯಾವುದೇ ಪಿಪಿಇ ಕಿಟ್ ಧರಿಸದೇ ಇರುವುದನ್ನು ನೋಡಬಹುದಾಗಿದೆ.
“ಗುಹೆಯೊಳಗೆ ಹೊಕ್ಕು ಸ್ಯಾಂಪಲ್ ಸಂಗ್ರಹಣೆ ಮಾಡುವ ವೇಳೆ ಬಾವುಲಿಯೊಂದರ ಹಲ್ಲು ನಾನು ಹಾಕಿದ್ದ ರಬ್ಬರ್ ಗ್ಲೌವ್ಸ್ ಗೆ ಸೂಜಿಯಂತೆ ಒಳಗೆ ಹೊಕ್ಕಿತ್ತು” ಎಂದು ಸಂಶೋಧಕರೊಬ್ಬರು ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದಾಗಿದೆ.
ಇದೇ ವಿಡಿಯೋದಲ್ಲಿ ವಿಜ್ಞಾನಿಯೊಬ್ಬರು ತಮ್ಮ ಬರಿಗೈಯಲ್ಲೇ ಬಾವುಲಿಯೊಂದನ್ನು ಹಿಡಿದಿರುವುದಲ್ಲದೇ, ವ್ಯಕ್ತಿಯೊಬ್ಬರಿಗೆ ಮತ್ತೊಂದು ಬಾವುಲಿ ಕಚ್ಚುತ್ತಿರುವುದನ್ನೂ ನೋಡಬಹುದಾಗಿದೆ.
ಇದೇ ಬಾವುಲಿಗಳಿಂದ ಕಚ್ಚಿಸಿಕೊಂಡ ವಿಜ್ಞಾನಿಗಳಿಗೆ ಕೊರೋನಾ ವೈರಸ್ ಹಬ್ಬಿದ್ದು, ಈ ವೈರಾಣುಗಳು ಪ್ರಾಣಿಗಳಿಂದ ಮನುಷ್ಯನ ದೇಹದೊಳಗೆ ಹೇಗೆ ಹೊಕ್ಕಿವೆ ಎಂದು ವಿಶ್ಲೇಷಿಸಬಹುದಾಗಿದೆ. ಚೀನಾದ ಅತಿ ದೊಡ್ಡ ನ್ಯೂಸ್ ಚಾನೆಲ್ ಆದ ಸಿಸಿಟಿವಿ 13ನಲ್ಲಿ ಈ ವಿಡಿಯೋ ದಾಖಲಾಗಿದ್ದು, ಸದ್ಯಕ್ಕೆ ಆನ್ಲೈನ್‌ನಲ್ಲಿ ಲಭ್ಯವಿಲ್ಲ.
ವುಹಾನ್‌ನ ಸೀಫುಡ್ ಮಾರ್ಕೆಟ್ ಒಂದರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಳ್ಳಲಾಗಿದೆ ಎನ್ನಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಅಲ್ಲಿಗೆ ಬಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡವೊಂದು ಸದ್ಯದ ಮಟ್ಟಿಗೆ 14 ದಿನಗಳ ಕ್ವಾರಂಟೈನ್‌ನಲ್ಲಿ ಇದೆ.