ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ.
ಈ ರಾಷ್ಟ್ರೀಯ ಅಭಯಾರಣ್ಯದ ವೀಚಾಟ್ ಖಾತೆಯಲ್ಲಿ ಎರಡೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಮೈಪೂರ್ತಿ ಬೆಳ್ಳಗೆ ಇರುವ ಈ ಪಾಂಡಾ ಮರವೊಂದರ ಬಳಿ ಇದ್ದು ಕ್ಯಾಮೆರಾದತ್ತ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.
ವಿರಳಾತಿವಿರಳವಾದ ಜೀವಿಗಳಾದ ಪಾಂಡಾಗಳು ಜಗತ್ತಿನಲ್ಲಿ ಕೇವಲ 1,864ರಷ್ಟು ಮಾತ್ರವೇ ಇವೆ ಎಂದು 2014ರ ಗಣತಿಯ ವರದಿಯಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ ಅಲ್ಬಿನೋ ಪಾಂಡಾಗಳು ಇನ್ನೂ ಕಡಿಮೆ ಸಂಖ್ಯೆಯಲ್ಲಿವೆ. ವಂಶವಾಹಿನಿಯ ವರ್ಗಾವಣೆ ಸಂದರ್ಭದಲ್ಲಿ ಆಗುವ ವ್ಯತ್ಯಾಸದಿಂದ ಈ ಪಾಂಡಾಗಳು ಬೆಳ್ಳಗೆ ಇರುತ್ತವೆ.
ಚೀನಾದಲ್ಲಿ ಇರುವ ಪಾಂಡಾಗಳ ಪೈಕಿ 80%ನಷ್ಟು ಸಿಚುವಾನ್‌ನಲ್ಲಿಯೇ ಇದ್ದು, ಇವುಗಳ ರಕ್ಷಣೆಗೆ ಚೀನಾ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.