ಎರಡನೇ ವಿಶ್ವ ಸಮರದಲ್ಲಿ ಭಾಗಿಯಾಗಿದ್ದ ಅಮೆರಿಕಾದ ವೀರಯೋಧ ಸುಟ್ಟೆ ಎಕನಾಮಿಯ ಅಂತ್ಯಕ್ರಿಯೆಯನ್ನು ಅವರ ಕೊನೆ ಆಸೆಯಂತೆ ನೆರವೇರಿಸಿದ್ದಾರೆ. ವಿಭಿನ್ನ ಹಾಗೂ ವಿಶಿಷ್ಟ ರಾಷ್ಟ್ರಭಕ್ತರಾಗಿದ್ದ ಅವರು, ರಿಂಗ್ಲೆ ಕಂಪನಿಯ ಜ್ಯೂಸಿ ಫ್ರೂಟ್ ಚ್ಯುಯಿಂಗ್ ಗಮ್ ನ್ನು ಅಷ್ಟೇ ಇಷ್ಟಪಡುತ್ತಿದ್ದರು. ಅಲ್ಲದೆ, ಸದಾಕಾಲ ತಮ್ಮ ಬಳಿ ಇರುತ್ತಿದ್ದ ಚ್ಯುಯಿಂಗ್ ಗಮ್ ನ್ನು ಸಿಕ್ಕವರಿಗೆಲ್ಲ ಹಂಚುತ್ತಿದ್ದರು.
94 ವರ್ಷದ ಸುಟ್ಟೆ ಹೃದ್ರೋಗದಿಂದಾಗಿ ವರ್ಜಿನಿಯಾದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕಳೆದ 45 ವರ್ಷಗಳಿಂದ ಕುಟುಂಬ ಸ್ನೇಹಿತರಾಗಿರುವ ಓಕೀಸ್ ಫನರಲ್ ಸರ್ವೀಸ್ ಮಾಲೀಕ ಓಕಿ ಅವರು, ಸುಟ್ಟೆ ಮಕ್ಕಳ ಬಳಿ ತನ್ನ ಸ್ನೇಹಿತನ ಕೊನೆಯ ಆಸೆ ಪ್ರಕಟಿಸಿದರು.
ಭೇಟಿಗೆ ಬಂದಾಗಲೆಲ್ಲ ಚ್ಯುಯಿಂಗ್ ಗಮ್ ಕೊಡುತ್ತಿದ್ದರು. ಸಂಸ್ಥೆಯ ನೌಕರರಿಗೂ ಬಿಡುತ್ತಿರಲಿಲ್ಲ. ಚ್ಯುಯಿಂಗ್ ಗಮ್ ಮಾದರಿಯ ಶವಪೆಟ್ಟಿಗೆ ಮಾಡಿಕೊಡಲೂ ಕೇಳಿದ್ದರು. ಆದರೆ, ಅದಕ್ಕೆ ರಿಂಗ್ಲೆ ಸಂಸ್ಥೆಯ ಅನುಮತಿ ಬೇಕು ಎಂದಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ರಿಂಗ್ಲೆ ಸಂಸ್ಥೆಯ ಉಪಾಧ್ಯಕ್ಷರ ಭೇಟಿ ಬಳಿಕ ಅನುಮತಿ ಸಿಕ್ಕಿತು. ಕೊನೆಗೆ ಸುಟ್ಟೆ ಕುಟುಂಬಕ್ಕೆ ರಿಂಗ್ಲೆ ಸಂಸ್ಥೆಯ ಕೆಲ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಲಾಯಿತು. ಸುಟ್ಟೆ ಕಡೆಯ ಆಸೆಯಂತೆ ರಿಂಗ್ಲೆಯ ಡಬಲ್ ಮಿಂಟ್ ಗಮ್ ಲೋಗೊ ಬಳಸಿ ಶವಪೆಟ್ಟಿಗೆ ತಯಾರಿಸಿ, ಅಂತ್ಯಕ್ರಿಯೆ ಮಾಡಲಾಯಿತು.