ಟಿವಿ, ಮೊಬೈಲ್, ಕಂಪ್ಯೂಟರ್ ಇವೆಲ್ಲವೂ ಜನರಿಗೆ ಹತ್ತಿರವಾಗೋಕೂ ಮುನ್ನವೇ ಪ್ರತಿಯೊಂದು ಮನೆಗೂ ಸುದ್ದಿ ತಲುಪಿಸುವ ಕಾರ್ಯ ಮಾಡುತ್ತಿದುದು ರೇಡಿಯೋ. ಇದೀಗ ರೇಡಿಯೋ ಬಳಕೆ ಮಾಡುವವರ ಸಂಖ್ಯೆ ಬೆರಳಣಿಕೆಯಷ್ಟಿದ್ದರೂ ಕೂಡ ಆಕಾಶವಾಣಿ ಇಂದಿಗೂ ತನ್ನ ಘನತೆಯನ್ನ ಕಳೆದುಕೊಂಡಿಲ್ಲ.
ಹೀಗಾಗಿಯೇ ಫೆಬ್ರವರಿ 13ರ ದಿನವನ್ನ ʼವಿಶ್ವ ರೇಡಿಯೋʼ ದಿನ ಎಂದೇ ಕರೆಯಲಾಗುತ್ತದೆ.
2011ರ ನವೆಂಬರ್ 3ನೇ ತಾರೀಖು ಯುನೆಸ್ಕೋ 36ನೇ ಸಮ್ಮೇಳನದ ವೇಳೆ ಈ ದಿನವನ್ನ ರೇಡಿಯೋಗೆ ಅರ್ಪಿಸಲು ನಿರ್ಧರಿಸಿತ್ತು.
ನಿಮ್ಮದೇ ಕುಟುಂಬದ ಹಳೆಯ ತಲೆಮಾರುಗಳ ಬಳಿ ಹೋಗಿ ನೀವು ರೇಡಿಯೋ ಬಗ್ಗೆ ಕೇಳಿದ್ರೆ ಅದರ ಮಹತ್ವ ಏನಾಗಿತ್ತು ಅನ್ನೋದು ನಿಮಗೆ ತಿಳಿಯುತ್ತೆ. ಆದರೆ ಸ್ಮಾರ್ಟ್ಫೋನ್, ಕಂಪ್ಯೂಟರ್, ಟಿವಿ ಹೀಗೆ ಇವೆಲ್ಲಾ ಎಲೆಕ್ಟ್ರಾನಿಕ್ ಸಾಧನಗಳು ಮನೆಗೆ ಬಂದ ಮೇಲೆ ರೇಡಿಯೋ ಮೂಲೆ ಸೇರುತ್ತಾ ಹೋಗಿದೆ.
ಫೆಬ್ರವರಿ 13ನ್ನೇ ರೇಡಿಯೋ ದಿನ ಎಂದು ಪರಿಗಣಿಸೋಕೆ ಮುಖ್ಯ ಕಾರಣ ಕೂಡ ಇದೆ. ಯಾಕಂದ್ರೆ 1946ರಲ್ಲಿ ಇದೇ ದಿನದಂದು ಯುನೈಟೆಡ್ ನೇಷನ್ಸ್ ರೇಡಿಯೋವನ್ನ ಸ್ಥಾಪನೆ ಮಾಡಲಾಯ್ತು. ಹೀಗಾಗಿ ಫೆಬ್ರವರಿ 13 ವಿಶ್ವ ರೇಡಿಯೋ ದಿನ ಎಂದು ಖ್ಯಾತಿ ಪಡೆದಿದೆ.
ಈ ವರ್ಷದ ರೇಡಿಯೋ ದಿನದ ಘೋಷಣೆ ʼಹೊಸ ವಿಶ್ವ, ಹೊಸ ರೇಡಿಯೋʼ ಎಂದಾಗಿದೆ. ಕೊರೊನಾದಂತಹ ಕಠಿಣ ಸಂದರ್ಭದಲ್ಲಿ ಮಾಧ್ಯಮಗಳು ಒದಗಿಸಿದ ಸೇವೆಯನ್ನ ಗಮನದಲ್ಲಿಟ್ಟುಕ್ಕೊಂಡು ಈ ಘೋಷವಾಕ್ಯವನ್ನ ನಿರ್ಧರಿಸಲಾಗಿದೆ. ಇದನ್ನ ಮೂರು ಉಪಭಾಗಗಳಾಗಿ ವಿಂಗಡಿಸಲಾಗಿದೆ.
ವಿಕಸನ: ಜಗತ್ತು ಬದಲಾಗುತ್ತದೆ, ರೇಡಿಯೋ ವಿಕಸನಗೊಳ್ಳುತ್ತದೆ. ಇದು ವಿಶ್ವದಲ್ಲಿ ರೇಡಿಯೋದ ಸ್ಥಿರತೆಯನ್ನ ಸೂಚಿಸುತ್ತದೆ.
ನಾವಿನ್ಯತೆ: ಪ್ರಪಂಚ ಬದಲಾಗುತ್ತಿದೆ. ಈ ಬದಲಾವಣೆಗೆ ರೇಡಿಯೋ ಹೊಂದಿಕೊಳ್ತಿದೆ ಹಾಗೂ ಹೊಸತನವನ್ನ ನೀಡುತ್ತಿದೆ.
ಸಂಪರ್ಕ: ಪ್ರಪಂಚ ಬದಲಾಗುತ್ತಿದೆ. ರೇಡಿಯೋ ಸಂಪರ್ಕಿಸುತ್ತಿದೆ. ಈ ಮೂಲಕ ಸಮಾಜಕ್ಕೆ ರೇಡಿಯೋ ನೀಡಿದ ಸೇವೆಗಳನ್ನ ಹೈಲೈಟ್ ಮಾಡಲಾಗಿದೆ.