ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು.
ನಿಕೋಲ್ ರುಸ್ಸೋ ತನ್ನ ಬಾಯ್‌ಫ್ರೆಂಡ್ ಜೊತೆಗೆ 2013ರಲ್ಲಿ ಎಂಗೇಜ್ ಆಗಿದ್ದರು. ಆದರೆ ಎಂಗೇಜ್ಮೆಂಟ್ ಆದ ವರ್ಷದ ಬಳಿಕ ವಿಚಿತ್ರ ನಡೆಯೊಂದರಲ್ಲಿ ಆಕೆ ಈ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಳು. ಕನ್ನಡಿ ಮುಂದೆ ನಿಂತುಕೊಂಡು ತನ್ನದೇ ಪ್ರತಿಬಿಂಬವನ್ನು ನೋಡಿಕೊಂಡು ತನಗೇ ಉಂಗುರವನ್ನು ಹಾಕಿಕೊಂಡು ಸ್ವಯಂ ನಿಶ್ವಿತಾರ್ಥ ಮಾಡಿಕೊಂಡಿದ್ದಳು ನಿಕೋಲ್.
ತನಗೆ ಕಾಡುತ್ತಿದ್ದ ಅಭದ್ರತೆಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದ ಕಾರಣಗಳಿಂದ ಈ ನಿಶ್ಚಿತಾರ್ಥ ಮುರಿದುಕೊಂಡಿದ್ದಾಗಿ ನಿಕೋಲ್ ಹೇಳಿಕೊಂಡಿದ್ದಳು. ಇದಾದ ನಾಲ್ಕು ವರ್ಷಗಳ ಬಳಿಕ ತನ್ನ ಬಾಯ್‌ಫ್ರೆಂಡ್ ಪೌಲೋ ಡಿ ಸೋಝಾ ಬಳಿ ಮತ್ತೆ ಹೋದ ಆಕೆ ತನ್ನ ಮನಸ್ಸನ್ನು ಬದಲಿಸಿರುವುದಾಗಿ ತಿಳಿಸಿದ್ದಳು.
2019ರ ಅಕ್ಟೋಬರ್ 12ರಂದು ತನ್ನ ಬಂಧುಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಪೌಲೋನನ್ನು ವರಿಸಿದ್ದಾಳೆ ನಿಕೋಲ್.