ತಾನು 37 ವಾರಗಳ ಗರ್ಭಿಣಿ ಎಂಬುದೇ ಆಕೆಗೆ ಗೊತ್ತಿಲ್ಲ. ಅಷ್ಟರಲ್ಲಾಗಲೇ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾಳೆ.
ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಗ್ರೇಸ್ ಮೀಚಿಮ್, ಗರ್ಭಾವಸ್ಥೆಯ ಬಗ್ಗೆ ತಿಳಿವಳಿಕೆ ಇರುವಾಕೆ. ಆದರೆ, ಈ ಬಾರಿ ಆಕೆ ಗರ್ಭಧಾರಣೆಯ ಯಾವ ಲಕ್ಷಣಗಳನ್ನೂ ಹೊಂದಿರಲಿಲ್ಲ. ಆದರೂ ಶೌಚಾಲಯಕ್ಕೆ ಹೋದಾಗ ಮಗುವನ್ನು ಹೆತ್ತಿದ್ದಾಳೆ.
ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಗ್ರೇಸ್ ಳ ಋತುಚಕ್ರದಲ್ಲೂ ಯಾವ ಬದಲಾವಣೆ ಆಗಿರಲಿಲ್ಲ. ಹೊಟ್ಟೆ ಕೂಡ ಮುಂದೆ ಬಂದಿರಲಿಲ್ಲ. ಎಲ್ಲ ಪರೀಕ್ಷೆಗಳೂ ನೆಗೆಟೀವ್ ಎಂದೇ ಬಂದಿತ್ತು. ಜನವರಿಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಗಡ್ಡೆಯೊಂದನ್ನು ತೆಗೆಸಿದ್ದಳು. ಇಷ್ಟೆಲ್ಲ ಆದರೂ ತನ್ನೊಳಗೊಂದು ಭ್ರೂಣ ಇದ್ದದ್ದೇ ಗೊತ್ತಾಗಿರಲಿಲ್ಲ.
ಶೌಚಕ್ಕೆಂದು ಹೋದಾಗ ಪ್ರಸವದ ಮುನ್ಸೂಚನೆ ಅನುಭವಕ್ಕೆ ಬಂದಿದೆ. ಗಾಬರಿಯಾಗಿ ಕಿರುಚಿಕೊಂಡಾಗ ಗಂಡ, ಮಕ್ಕಳು ಓಡಿ ಬಂದಿದ್ದಾರೆ. ಆ್ಯಂಬುಲೆನ್ಸ್ ಗೂ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ಬರುವುದರೊಳಗೆ ಹೆಣ್ಣು ಮಗುವಿನ ಜನನವಾಗಿ ಗಂಡನ ಕೈಯಲ್ಲಿತ್ತು. ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದು, ತಾಯಿ – ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ವಿಷಯ ತಿಳಿದ ಗ್ರೇಸ್ ತಾಯಿ ಶುಭಾಶಯ ಕೋರಿದ್ದಾರೆ.