ಕೊರೊನಾ ವೈರಸ್ ಹರಡುವಿಕೆಯನ್ನ ಕಡಿಮೆ ಮಾಡಲಿಕ್ಕೋಸ್ಕರ ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಿಲ್ಲೊಂದು ಮುನ್ನೆಚ್ಚರಿಕಾ ಕ್ರಮಗಳನ್ನ ಜಾರಿ ಮಾಡುತ್ತಲೇ ಇದೆ.
ಅದೇ ರೀತಿ ಕೆನಡಾದ ಕ್ವಿಬೆಕ್ನಲ್ಲಿ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೆ ನಾಲ್ಕು ವಾರಗಳ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನೈಟ್ ಕರ್ಫ್ಯೂಗೆ ಕೆಲ ವಿನಾಯಿತಿಯನ್ನೂ ನೀಡಲಾಗಿದೆ. ಕಾರ್ಮಿಕರಿಗೆ ಹಾಗೂ ಸಾಕು ಪ್ರಾಣಿಗಳನ್ನ ಹೊಂದಿರುವವರಿಗೆ ನೈಟ್ ಕರ್ಫ್ಯೂ ಅವಧಿಯಲ್ಲಿ ಸಂಚಾರ ಮಾಡಲು ಅವಕಾಶ ನೀಡಲಾಗಿದೆ.
ಆದರೆ ಈ ವಿನಾಯಿತಿಯ ಲಾಭ ಪಡೆಯಲು ಮುಂದಾದ ಮಹಿಳೆಯೊಬ್ಬಳು ಶೆಬ್ರೂಕ್ನ ಕಿಂಗ್ ಸ್ಟ್ರೀಸ್ ಈಸ್ಟ್ನಲ್ಲಿ ತನ್ನ ಪತಿಯ ಕುತ್ತಿಗೆಗೆ ಬೆಲ್ಟ್ ತೊಡಿಸಿ ವಾಕ್ ಮಾಡುವ ಮೂಲಕ ಸುದ್ದಿಯಾಗಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶೆಬ್ರೂಕ್ ಪೊಲೀಸ್ ಠಾಣೆಯ ಅಧಿಕಾರಿ, ಈ ದಂಪತಿ ಪೊಲೀಸರ ವಿಚಾರಣೆಗೆ ಸಹಕರಿಸಿಲ್ಲ. ಅಲ್ಲದೇ ಮಹಿಳೆ ತಾನು ನೈಟ್ ಕರ್ಫ್ಯೂ ನಿಯಮವನ್ನ ಪಾಲನೆ ಮಾಡಿದ್ದೇನೆ ಎಂದೇ ವಾದ ಮಾಡುತ್ತಿದ್ದಳು. ಈ ತಪ್ಪಿಗಾಗಿ ಅವರಿಬ್ಬರಿಗೆ ತಲಾ 1,09,958 ರೂ. ದಂಡ ವಿಧಿಸಲಾಗಿದೆ. ಇದನ್ನ ಪಾವತಿಸಲೂ ದಂಪತಿ ಕಿರಿಕ್ ಮಾಡಿದ್ದಾರೆ ಎಂದು ಹೇಳಿದ್ರು.