ಕೊರೋನಾ ವೈರಸ್ ಲಾಕ್ಡೌನ್‌ನಿಂದ ಎಲ್ಲರಿಗಿಂತ ತುಸು ಹೆಚ್ಚೇ ತೊಂದರೆಯಲ್ಲಿರುವವರು ಎಂದರೆ ವಯಸ್ಕರು. ಸೋಂಕಿನಿಂದ ಚೇತರಿಸಿಕೊಳ್ಳಲು ಹೆಚ್ಚು ಅವಧಿ ಬೇಕಾಗುವುದಲ್ಲದೇ, ಈ ಸಮಯದಲ್ಲಿ ಅವರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಇನ್ನೂ ದೊಡ್ಡ ಸವಾಲಾಗಿದೆ.
ವೃದ್ಧಾಶ್ರಮಗಳಲ್ಲಿರುವ ಹಿರಿಯ ಜೀವಗಳು ತಮ್ಮ ಕುಟುಂಬಸ್ಥರನ್ನು ಕಾಣದೇ ತಿಂಗಳುಗಳು ಕಳೆದ ಕಾರಣ ಒಳಗೊಳಗೇ ಮಾನಸಿಕವಾಗಿ ಪರಿತಪಿಸುವಂತಾಗಿದೆ.
ಅಲೆಕ್ಸ್ ಪೆಯರ್ಸ್ ಹೆಸರಿನ ನವವಿವಾಹಿತ ಮಹಿಳೆಯೊಬ್ಬರು ತಮ್ಮ ವೆಡ್ಡಿಂಗ್ ಧಿರಿಸಿನಲ್ಲಿ 320 ಕಿಮೀ ದೂರ ಕ್ರಮಿಸಿ, 87 ವರ್ಷದ ತಮ್ಮ ಅಜ್ಜನೊಂದಿಗೆ ಕೇಕ್ ಮತ್ತು ಶಾಂಪೇನ್ ಸವಿದಿದ್ದಾರೆ. ಗ್ರಹಂ ಬರ್ಲಿ ಹೆಸರಿನ ಈ ವೃದ್ಧ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದು, ಮೊಮ್ಮಗಳನ್ನು ಅಪ್ಪಿ ಆಶೀರ್ವದಿಸಲು ಸಾಧ್ಯವಾಗದೇ ಇದ್ದರೂ ಸಹ ಆಕೆಯನ್ನು ಮದುವಣಗಿತ್ತಿಯ ಅವತಾರದಲ್ಲಿ ಕಂಡು ಸಂತಸ ಪಟ್ಟಿದ್ದಾರೆ.
ಈ ಹೃದಯಸ್ಪರ್ಶಿ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಅಲೆಕ್ಸ್ ಹಾಗೂ ಆಕೆಯ ಪತಿ ಗ್ರಹಾಂರನ್ನು ಭೇಟಿ ಮಾಡುವ ಮುನ್ನ ದೇಹದ ತಾಪಮಾನವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಬಂದಿತ್ತು.