ನ್ಯೂಯಾರ್ಕ್: ದೇಶಾದ್ಯಂತ ಅಂಗಡಿ ಕಳ್ಳತನ ಮಾಡಿ ಅದನ್ನು ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಇಬೇ ನಲ್ಲಿ ಮಾರಾಟ ಮಾಡುತ್ತಿದ್ದ ಐನಾತಿ ಮಹಿಳೆಯನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಕಳೆದ 19 ವರ್ಷಗಳಿಂದ ಆಕೆ ಈ ಕಾರ್ಯದಲ್ಲಿ ತೊಡಗಿದ್ದು ತನಿಖೆಯಿಂದ ತಿಳಿದು ಬಂದಿದೆ.
ಕಿಮ್ ರಿಚರ್ಡ್ ಸನ್ ಎಂಬ 63 ವರ್ಷದ ಮಹಿಳೆ ಬಂಧನಕ್ಕೊಳಗಾದವಳು. ತನ್ನ 40 ನೇ ವಯಸ್ಸಿನಿಂದಲೇ ಆಕೆ ಕಳ್ಳತನ ಪ್ರಾರಂಭಿಸಿದ್ದಳು. ತನಿಖೆ ವೇಳೆ ಆಕೆ ಅದನ್ನು ಒಪ್ಪಿಕೊಂಡಿದ್ದು, ಸುಮಾರು 2000 ಇಸವಿಯಿಂದಲೇ ಕಳ್ಳತನಕ್ಕಿಳಿದಿದ್ದಾಗಿ ಹೇಳಿಕೊಂಡಿದ್ದಾಳೆ.
ಅಮೆರಿಕಾ ನ್ಯಾಯಾಲಯ ಆಕೆಗೆ 4.5 ವರ್ಷ ಜೈಲು ಶಿಕ್ಷೆ , 3.8 ಮಿಲಿಯನ್ ಡಾಲರ್( 22 ಕೋಟಿ ಭಾರತೀಯ ರೂಪಾಯಿ)ದಂಡ ವಿಧಿಸಿದೆ ಎಂದು ಯುಎಸ್ ಅಟಾರ್ನಿ ರಾಯನ್ ಕೆ.ಪೆಟ್ರಿಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಡೀ ಅಮೆರಿಕಾ ಸುತ್ತುತ್ತಿದ್ದ ಮಹಿಳೆ ಅಲ್ಲಿ ಸಣ್ಣ ಅಂಗಡಿಗಳಲ್ಲಿ ವಸ್ತುಗಳನ್ನು ಕದಿಯುತ್ತಿದ್ದಳು. ನಂತರ ಅವುಗಳನ್ನು ಒಂದು ಕಪ್ಪು ಬ್ಯಾಗ್ ನಲ್ಲಿ ಹಾಕಿಕೊಂಡು ಹೋಗುತ್ತಿದ್ದಳು. ಅವುಗಳನ್ನು ಇಬೇಯಲ್ಲಿ ಮಾರಾಟಕ್ಕೆ ಇಟ್ಟು, ಅಮೆರಿಕಾದ ಸರ್ಕಾರಿ ಪಾರ್ಸಲ್ ವ್ಯವಸ್ಥೆ ಯುನೈಟೆಡ್ ಸ್ಟೇಟ್ಸ್ ಮೇಲ್, ಖಾಸಗಿಯಾದ ಫೆಡರಲ್ ಎಕ್ಸ್ ಪ್ರೆಸ್, ಯುನೈಟೆಡ್ ಪಾರ್ಸಲ್ ಸರ್ವೀಸ್ ಮುಂತಾದವುಗಳ ಮೂಲಕ ರವಾನೆ ಮಾಡುತ್ತಿದ್ದಳು ಎನ್ನಲಾಗಿದೆ.