ಎರಡು ವರ್ಷಗಳ ಹಿಂದೆ ಕೊಲಂಬಿಯಾದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪೋರ್ಟೋ ಕೊಲಂಬಿಯಾ ತೀರದ ಬಳಿ ಸಮುದ್ರದಲ್ಲಿ ತೇಲಾಡುತ್ತಾ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ ಮಹಿಳೆಯನ್ನು ಅವರ ಇಬ್ಬರು ಮಕ್ಕಳು ಕಳೆದ ಎರಡು ವರ್ಷಗಳಿಂದ ನೋಡಿಲ್ಲ. ಸೆಪ್ಟೆಂಬರ್ 26ರಂದು, ರೊನಾಲ್ಡೋ ವಿಸ್ಬಲ್ ಹೆಸರಿನ ಮೀನುಗಾರರೊಬ್ಬರು 46 ವರ್ಷದ ಈ ಮಹಿಳೆ ತಮ್ಮಿಂದ 1.5 ಕಿಮೀ ದೂರದಲ್ಲಿ ತೇಲುತ್ತಿರುವುದನ್ನು ಕಂಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ರೊನಾಲ್ಡೋ ಮಹಿಳೆಯನ್ನು ನೀರಿನಿಂದ ಮೇಲೆತ್ತಲು ಸಫಲರಾಗಿದ್ದಾರೆ.
ಅಂಜೆಲಿಕಾ ಗೈಟಾನ್ ಹೆಸರಿನ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮೀನುಗಾರನಿಗೆ ಸಿಕ್ಕಿದ್ದಾರೆ. ಅವರನ್ನು ರಕ್ಷಿಸುವ ವೇಳೆ ಸೆರೆ ಹಿಡಿಯಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಪತಿಯಿಂದ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಒಡನಾಟಕ್ಕೆ ಬ್ರೇಕ್ ಬಿದ್ದಿದ್ದಾಗಿ ಹೇಳಿರುವ ಈ ಮಹಿಳೆ, ತಮ್ಮನ್ನು ಮನೆಯಲ್ಲಿ ಕೂಡಿಹಾಕಿದ್ದ ಪತಿ ಬಹಳ ಹಿಂಸೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ. 2018ರ ಅಂತ್ಯದಲ್ಲಿ ತಮ್ಮನ್ನು ಕೂಡಿ ಹಾಕಿದ್ದ ಜಾಗದಿಂದ ತಪ್ಪಿಸಿಕೊಂಡಿದ್ದ ಮಹಿಳೆ ಹತ್ತಿರದ ಆಶ್ರಯ ಕೇಂದ್ರವೊಂದನ್ನು ಕೂಡಿಕೊಂಡಿದ್ದರು. ಆದರೆ ಆಶ್ರಯ ಕೇಂದ್ರದಿಂದಲೂ ತಮ್ಮನ್ನು ಹೊರಹೋಗುವಂತೆ ಮಾಡಿದ ಬಳಿಕ ಈ ರೀತಿ ತಮ್ಮ ಜೀವವನ್ನೇ ತೆಗೆದುಕೊಳ್ಳಲು ಅಂಜೆಲಿಕಾ ಮುಂದಾಗಿದ್ದರು.