ಕೆಲಸದ ಸಂದರ್ಶನವೆಂದರೆ ಎಂಥವರಿಗೂ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ಇಂಥ ಒಂದು ಸಂದರ್ಶನ ಮುಗಿಸಿ ಕೆಲಸ ಪಕ್ಕಾ ಆದ ಕೆಲವೇ ಕ್ಷಣಗಳಲ್ಲಿ ಎಡವಟ್ಟೊಂದನ್ನು ಮಾಡಿಕೊಂಡ ಯುವತಿಯೊಬ್ಬರು ಭಾರೀ ಮುಜುಗರಕ್ಕೆ ಈಡಾಗಿದ್ದಾರೆ.
ಸಾಂಕ್ರಮಿಕದ ನಡುವೆಯೂ ಯುವತಿಯ ಸಂದರ್ಶನವನ್ನು ಖುದ್ದು ಸಿಇಓ ಅವರೇ ತೆಗೆದುಕೊಂಡಿದ್ದು, ಸಹಜವಾಗಿಯೇ ಆರಂಭದಲ್ಲಿ ನರ್ವಸ್ ಆಗಿದ್ದಾಗಿ ಹೇಳಿಕೊಂಡಿರುವ @TipsyTraveler ಹೆಸರಿನ ರೆಡ್ಡಿಟ್ ಬಳಕೆದಾರಿಣಿ ತನ್ನ ಅನುಭವ ಹಂಚಿಕೊಂಡಿದ್ದಾರೆ.
“ಸಂದರ್ಶಕರು ಸುಮಾರು 50 ವರ್ಷ ವಯಸ್ಸಿನವರಿರಬಹುದು. ಮೇಲಂತಸ್ತಿನಲ್ಲಿ ಸಂದರ್ಶನ ನಡೆಯಬಹುದು ಎಂದು ಅಂದಾಜಿಸಿ ಅವರನ್ನು ಭೇಟಿ ಮಾಡಲು ಎದ್ದು ಹೊರಟೆ. ನಾನು ಮೆಟ್ಟಿಲು ಹತ್ತಿಕೊಂಡು ಹೋಗುತ್ತಿದ್ದಂತೆಯೇ ಅವರು ತಮ್ಮ ಕೈಗಳನ್ನು ಮೇಲೆತ್ತುವುದನ್ನು ನೋಡಿದೆ. ಆಗ ನನ್ನ ಮೆದುಳು ಸ್ಥಬ್ದವಾದಂತೆ ಅನಿಸಿತು” ಎಂದು ಆಕೆ ಬರೆದುಕೊಂಡಿದ್ದಾರೆ.
“ಆಗ ನನ್ನ ಮನದಲ್ಲಿ ಇದ್ದಿದ್ದು ಎರಡೇ ಆಲೋಚನೆಗಳು. ಒಂದು; ನನ್ನ ಕೈ ಹಿಡಿದುಕೊಂಡು ಸಂದರ್ಶನದ ಕೋಣೆಗೆ ಧಾವಿಸಿ ಎಂದು ಅವರು ಎಸ್ಕಾರ್ಟ್ ಮಾಡಲು ತಿಳಿಸಿದಂತೆಯೂ, ಮತ್ತೊಂದು; ಹ್ಯಾಂಡ್ ಶೇಕ್ ಮಾಡಲಾಗದ ಕಾರಣ ಎಲ್ಬೋ ಬಂಪ್ ಕೊಡಿ ಎಂದು ಅವರು ಕೇಳಿದಂತೆಯೂ” ಎಂದು ವಿವರಿಸಿದ್ದಾರೆ. ಈ ರೀತಿಯ ಬರಮಾಡಿಕೊಳ್ಳುವ ವಿಧಾನ ನೆದರ್ಲೆಂಡ್ಸ್ನಲ್ಲಿ ಅತ್ಯಂತ ಸಹಜ.
ಈ ಪರಿಸ್ಥಿತಿಯಲ್ಲಿ ಮೊದಲನೇ ಆಯ್ಕೆ ಆರಿಸಿಕೊಂಡ ಯುವತಿ ತಾನು ಈ ಹಿಂದೆ ನೋಡಿಯೇ ಇರದ ಸಿಇಓ ಬಾಹುಗಳನ್ನು ಹಿಡಿದುಕೊಂಡಿದ್ದಾರೆ. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಹೀಗೆ ಆಗಿಬಿಟ್ಟ ಬಳಿಕ ಆಕೆಯನ್ನು, “ನಿಮಗೆ ಎಲ್ಬೋ ಬಂಪ್ ಕೊಡಲು ಬಂದೆ ಎಂದುಕೊಂಡಿರಾ?” ಎಂದು ಪ್ರಶ್ನಿಸಿದ್ದಾರೆ.
ಅದು ಹೇಗೋ ಸಮಜಾಯಿಷಿ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ ಯುವತಿ, ಸಂದರ್ಶನದ ಮೊದಲ ಹಂತದಲ್ಲಿ ಪಾಸ್ ಆಗಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ.