ಚೀನಾದ ಹುಬೈ ಪ್ರಾಂತ್ಯದ ಮಹಿಳೆಯೊಬ್ಬಳು 10 ವರ್ಷಗಳ ಅಂತರದಲ್ಲಿ ಅವಳಿ ಮಗುವನ್ನು ಹೆತ್ತಿದ್ದಾಳೆ.
ತಾಯಿಯ ಗರ್ಭದಿಂದ ಹೊರ ಬರುವ ಅವಳಿ ಮಕ್ಕಳ ನಡುವೆ ಕೆಲವು ನಿಮಿಷ ಅಂತರವಿರಬಹುದು. ಕೆಲವು ತಾಸು ಹೆಚ್ಚು ಎಂದರೆ ಒಂದು ದಿನ ಅಂತರ ಸಾಧ್ಯ. ಇದ್ಹೇಗೆ 10 ವರ್ಷ ಸಾಧ್ಯ..? ಬೊಗಳೆ ಬಿಡ್ತಾರೆ ಎಂದು ನೀವಂದುಕೊಂಡಿರಬಹುದು.
ಆದರೆ, ಇದು ಸತ್ಯ. ಅತ್ಯಾಧುನಿಕ ಪ್ರನಾಳ ಉತ್ಪಾದಕತೆ ವಿಧಾನದ ಮೂಲಕ ಇದು ಸಾಧ್ಯವಾಗಿದೆ.
ವಾಂಗ್ ಎಂಬ ಚೀನಾದ ಮಹಿಳೆಗೆ ಮಕ್ಕಳಾಗುತ್ತಿರಲಿಲ್ಲ. ಪ್ರನಾಳ ಉತ್ಪಾದಕತೆ (ಐವಿಎಫ್) ವೈದ್ಯಕೀಯ ಚಿಕಿತ್ಸಾ ವಿಧಾನದ ಮೂಲಕ ಆಕೆ 2009 ರಲ್ಲಿ ಮಗು ಪಡೆಯಲು ಮುಂದಾದಳು. ವೈದ್ಯರು ಭ್ರೂಣಗಳ ಗುಂಪನ್ನು ಪ್ರನಾಳದಲ್ಲಿ ಸಿದ್ಧ ಮಾಡಿದ್ದರು. ಅದನ್ನು ಆ ವರ್ಷ ಅಕ್ಟೋಬರ್‌ನಲ್ಲಿ ವಾಂಗ್ ಗರ್ಭದಲ್ಲಿರಿಸಿದರು.
2010 ರ ಜೂನ್ ನಲ್ಲಿ ವಾಂಗ್ ಹುಬೈ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ಲುಲು ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು. ಉಳಿದ ಭ್ರೂಣಗಳನ್ನು ಹಾಗೆಯೇ ಸಂಗ್ರಹಿಸಲಾಗಿತ್ತು. 10 ವರ್ಷಗಳ ನಂತರ (ಆಕೆಗೀಗ 41 ರ ವಯಸ್ಸು) ವಾಂಗ್ ಗೆ ಮತ್ತೊಂದು ಮಗು ಪಡೆಯುವ ಆಸೆಯಾಯಿತು. ಮೊದಲು ಪ್ರನಾಳ ಶಿಶು ಪಡೆಯಲು ಸಹಕಾರ ಮಾಡಿದ್ದ ನಿರ್ದೇಶಕ ಕ್ಸಿಯೋಮಿ ಅವರನ್ನು ಭೇಟಿಯಾದರು. 10 ವರ್ಷಗಳ ಹಿಂದೆ ಪ್ರನಾಳದಲ್ಲಿ ಬೆಳೆದಿದ್ದ ಭ್ರೂಣಗಳನ್ನು ಮತ್ತೊಮ್ಮೆ ಆಕೆ ಗರ್ಭದಲ್ಲಿಡಲು ನೆರವಾದರು. ಜೂನ್ 16 ರಂದು ವಾಂಗ್ ಎರಡನೇ ಮಗುವಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಜನ್ಮ ನೀಡಿದ್ದಾರೆ.
ಮಗುವಿಗೆ ಟೊಂಗ್ ಟೊಂಗ್ ಎಂದು ಹೆಸರಿಡಲಾಗಿದ್ದು, ಹುಟ್ಟುವಾಗ 3.48 ಕೆಜಿ ತೂಕವಿದೆ. ಅಚ್ಚರಿಯ ಸಂಗತಿ ಎಂದರೆ 10 ವರ್ಷಗಳ ಹಿಂದೆ ಹುಟ್ಟಿದ ವಾಂಗ್ ಹಿರಿಯ ಮಗನೂ ಇಷ್ಟೇ ತೂಕವಿದ್ದ. ವೈದ್ಯಕೀಯ ಲೆಕ್ಕಾಚಾರದಲ್ಲಿ ಲುಲು ಮತ್ತು ಟೊಂಗ್ ಟೊಂಗ್ ಇಬ್ಬರೂ ಅವಳಿಗಳು ಎಂದು ಫರ್ಟಿಲಿಟಿ ಕೇಂದ್ರದ ವೈದ್ಯ ಚೆಂಗ್ ಜೇ ಹೇಳಿದ್ದಾರೆ. ವಿಶೇಷ ಎಂದರೆ 10 ವರ್ಷದ ಹಿಂದೆ ವಾಂಗ್ ಅವರಿಗೆ ಹೆರಿಗೆ ಮಾಡಿಸಿದ್ದ ವೈದ್ಯರೇ ಈಗಲೂ ಹೆರಿಗೆ ಮಾಡಿಸಿದ್ದಾರೆ. ಇಬ್ಬರೂ ಗಂಡು ಮಕ್ಕಳಾಗಿದ್ದು, ಜೂನ್ ನಲ್ಲೇ ಹುಟ್ಟಿದ್ದಾರೆ.
ಇಂಗ್ಲೆಂಡ್ ನ ಮಾನವ ಗರ್ಭಧಾರಣೆ ಮತ್ತು ಭ್ರೂಣ ಶಾಸ್ತ್ರ ಪ್ರಾಧಿಕಾರದ ತಜ್ಞರ ಪ್ರಕಾರ ಐವಿಎಫ್ ಚಿಕಿತ್ಸೆಯ ನಂತರ ಹೆಚ್ಚು ಉಳಿಯುವ ಭ್ರೂಣಗಳನ್ನು ಎಸೆಯದೇ ಸಂರಕ್ಷಿಸಿದರೆ ಚಿಕಿತ್ಸೆ ವಿಫಲವಾದರೆ ಉಳಿದವನ್ನು ಬಳಸಬಹುದು ಎನ್ನುತ್ತಾರೆ.