ಕೋವಿಡ್-19 ಸೋಂಕಿನ ಕಾರಣದಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಅವಧಿಗೂ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್ ನಗರದ ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಈಕೆಯನ್ನು ವೆಂಟಿಲೇಟರ್ ಸಹಾಯದಲ್ಲಿ ಇರಿಸಲಾಗಿತ್ತು. ಏಪ್ರಿಲ್ 10ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಆಕೆಗೆ ಹೆರಿಗೆ ಮಾಡಲಾಗಿತ್ತು.
“ನನಗೆ ಕೋವಿಡ್-19 ಬಂದಾಗ 24-25 ವಾರಗಳ ತುಂಬು ಗರ್ಭವಸ್ಥೆ. ಆಗ ನಾನು ಬಹಳ ಸಂಕಟದಲ್ಲಿದ್ದೆ. ಗರ್ಭಧಾರಣೆ ಕಾಣುವಂತೆ ಹೊಟ್ಟೆಯಲ್ಲಿ ಯಾವುದೇ ಊತ ಕಾಣದೇ ಇದ್ದ ಕಾರಣ ನನಗೆ ಬಹಳ ಚಿಂತೆಯಾಗಿತ್ತು. ನನಗೆ ಕೆಲವೊಮ್ಮೆ ಅವರನ್ನು ಕಂಡಾಗ ಆನಂದ ಭಾಷ್ಪ ಸುರಿಯುತ್ತದೆ. ವೈದ್ಯಕೀಯ ವಿಜ್ಞಾನದಲ್ಲಿ ಏನೆಲ್ಲಾ ಆಗುತ್ತದೆ ಎಂದು ತಿಳಿಯುವುದಕ್ಕೆ ಖುಷಿಯಾಗುತ್ತದೆ” ಎನ್ನುತ್ತಾರೆ ಅವಳಿ ಮಕ್ಕಳ ತಾಯಿ.
ಗಂಡು ಮಗುವಿಗೆ ಪಾಸ್ಕಲ್ ಹಾಗೂ ಹೆಣ್ಣು ಮಗುವಿಗೆ ಪಾಮರ್ ಎಂದು ಹೆಸರಿಡಲಾಗಿದೆ. ಇಬ್ಬರೂ ಸಹ ಹುಟ್ಟಿನ ಸಂದರ್ಭದಲ್ಲಿ ಕ್ರಮವಾಗಿ 770 ಗ್ರಾಂಗಳು ಹಾಗೂ 850 ಗ್ರಾಂಗಳು ತೂಗುತ್ತಿದ್ದವು ಎನ್ನಲಾಗಿದೆ.