ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ ಈ ಇಬ್ಬರು ತಮ್ಮ ಕಳೆದ ನಾಯಿಯನ್ನು ಅಷ್ಟು ದೂರದಿಂದ ಹುಡುಕಿ ತಂದಿದ್ದಾರೆ.
ಸೇಂಟ್ ಅಂಟೋನಿಯೋದ ಡೆಬಿ ವಾಜ್‌ಕ್ಯೂಜ್ ಎಂಬ ಮಹಿಳೆಯ ಮನೆಯಲ್ಲಿ ಮೂರು ನಾಯಿಗಳಿದ್ದವು. 2014 ರಲ್ಲಿ ಒಂದು ದಿನ ಆಡಲು ಹೊರಗೆ ಬಿಟ್ಟಿದ್ದರು. ವಾಪಸ್ ಕರೆದಾಗ ಎರಡು ನಾಯಿಗಳು ಮಾತ್ರ ವಾಪಸ್ ಬಂದವು. ಆದರೆ ಚಿಹುದು ಮಿಕ್ಸ್ ಎಂಬ ನಾಯಿ ವಾಪಸ್ ಬಂದಿರಲಿಲ್ಲ. ನಾಯಿಗಾಗಿ ಮಹಿಳೆ ಹುಡುಕದ ಸ್ಥಳವಿಲ್ಲ. ಆದರೂ ಪತ್ತೆಯಾಗಿರಲಿಲ್ಲ.
“ಈ ವರ್ಷ ಅಕ್ಟೋಬರ್ 24ರಂದು ನನಗೆ ಒಂದು ಧ್ವನಿ ಸಂದೇಶ ಬಂದಿತ್ತು. ಬ್ರೊವರ್ಡ್ ಕೌಂಟಿ ಹ್ಯುಮನ್ ಸೊಸೈಟಿ ಎದುರು ನಿಮ್ಮ ನಾಯಿ ಸಿಕ್ಕಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಯಾರೋ ಜೋಕ್ ಮಾಡುತ್ತಿದ್ದಾರೆ ಎಂದುಕೊಂಡೆ. ಏಕೆಂದರೆ 6 ವರ್ಷದಿಂದ ಹುಡುಕಿದರೂ ಸಿಗದ ಕಾರಣ ನಾಯಿ ಸತ್ತೇ ಹೋಗಿದೆ ಎಂದುಕೊಂಡಿದ್ದೆ. ನಾಯಿಗೆ ಒಂದು ಚಿಪ್ ಅಳವಡಿಸಿದ್ದೆ. ಅದರ ಮೂಲಕ ನನ್ನ ವಿಳಾಸ ಅಲ್ಲಿನವರಿಗೆ ತಿಳಿಯಿತು. ನಾವು 2,200 ಕಿಮೀ ತೆರಳಿ ನೋಡಿದಾಗ ಚಿಹುಹು ನಮ್ಮನ್ನು ಗುರುತಿಸಿತು ಎಂದು ವಾಜ್‌ಕ್ಯೂಜ್ ಖುಷಿ ವ್ಯಕ್ತಪಡಿಸಿದ್ದಾರೆ.