ಹದಿನಾರು ಬಾರಿ ತನ್ನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿಗೆ ಮಹಿಳೆಯೊಬ್ಬರು ಮೂತ್ರಪಿಂಡ (ಕಿಡ್ನಿ) ಕೊಟ್ಟು ಜೀವ ಉಳಿಸಿದ ಮನಕಲಕುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಲಬಮಾ ಪ್ರಾಂತ್ಯದ ಜಾಸ್ಲಿನ್ ಜೇಮ್ಸ್ (40) ಮಾದಕ ವ್ಯಸನಕ್ಕೆ ತುತ್ತಾಗಿದ್ದ ಮಹಿಳೆ. ಪೊಲೀಸ್ ಅಧಿಕಾರಿಯಾಗಿದ್ದ ಟರೆಲ್ ಪಾಟರ್ 2007 ರಿಂದ 2012 ರ ಅವಧಿಯಲ್ಲಿ ಜಾಸ್ಲಿನ್ ಳನ್ನು 16 ಬಾರಿ ಬಂಧಿಸಿದ್ದರು.
ಮಾದಕ ವ್ಯಸನದ ಕಾರಣದಿಂದಲೇ ಕಾರು, ಕೆಲಸ ಎಲ್ಲ ಕಳೆದುಕೊಂಡಿದ್ದ ಜಾಸ್ಲಿನ್, ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಳು. 6 ತಿಂಗಳ ಜೈಲುವಾಸದ ಬಳಿಕ 9 ತಿಂಗಳು ವ್ಯಸನಮುಕ್ತ ಪುನರ್ವಸತಿ ಕೇಂದ್ರದ ಆಶ್ರಯದಲ್ಲಿದ್ದಳು.
ವ್ಯಸನಮುಕ್ತಳಾದ ಬಳಿಕ ತನ್ನಂತೆ ಚಟಕ್ಕೆ ದಾಸರಾಗಿದ್ದ ಮಹಿಳೆಯರ ಮನಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಳು. ಒಂದು ದಿನ ಫೇಸ್ ಬುಕ್ ನಲ್ಲಿ ಪೊಲೀಸ್ ಅಧಿಕಾರಿ ಟೆರಲ್ ಪಾಟರ್ ಫೋಟೋ ಕಂಡು, ಅದರಲ್ಲಿ ಕಿಡ್ನಿ ಬೇಕು ಎಂಬುದನ್ನು ನೋಡಿ ದಾನ ಮಾಡಲು ಮುಂದಾದಳು.
ಈ ಸಂದರ್ಭದಲ್ಲಿ ತನ್ನನ್ನು ಬಂಧಿಸಿದ್ದನ್ನಾಗಲೀ, ಶಿಕ್ಷೆಗೆ ಗುರಿಪಡಿಸಿದ್ದನ್ನಾಗಲೀ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮಾನವೀಯತೆ ಮೆರೆದಿದ್ದಾಳೆ. ಇದೀಗ ಪೊಲೀಸ್ ಅಧಿಕಾರಿಯೂ ಚೇತರಿಸಿಕೊಂಡಿದ್ದಾರೆ.