ಬಾಯೊಳಗೆ ಚುರುಚುರು ಎನ್ನುವ ಅನುಭವ ಕೊಡುವ ಪಾಪಿಂಗ್ ಕ್ಯಾಂಡಿಯನ್ನು ಮೊದಲ ಬಾರಿಗೆ ತಿಂದವರಿಗೆ ಬಲೇ ಕಿರಿ ಕಿರಿ ಅನಿಸಬಹುದು. ಆದರೆ ಒಮ್ಮೆ ಈ ಕಿರಿ ಕಿರಿ ಅನುಭವ ಘಟಿಸಿಹೋದ ಬಳಿಕ ಈ ಕ್ಯಾಂಡಿ ಅಗಿಯುವುದು ಮೋಜಿನ ಅನುಭವ ಆಗಿಬಿಡುತ್ತದೆ.
ನಾವ್ಯಾಕೆ ಈ ಮಾತನ್ನು ಹೇಳುತ್ತಿದ್ದೀವಿ ಎಂದರೆ: ಬ್ರಿಟನ್‌ನ ಮಹಿಳೆಯೊಬ್ಬರು ಪಾಪಿಂಗ್ ಕ್ಯಾಂಡಿ ಎಂದು ತಪ್ಪಾಗಿ ಭಾವಿಸಿ, ಪಟಾಕಿಗಳನ್ನು ಅಗಿದ ಕಾರಣ ಆಕೆಯ ಬಾಯಲ್ಲಿ ಸುಟ್ಟ ಗಾಯಗಳು ಆಗಿಬಿಟ್ಟಿವೆ.
ವಾರ್ವಿಕ್‌ಷೈರ್‌ನ ಲಿಸಾ ಬೂತ್ರಾಯ್ಡ್ ಹೆಸರಿನ ಈ ಮಹಿಳೆ ಸ್ಥಳೀಯ ಅಂಗಡಿಯೊಂದರಲ್ಲಿ ಸಿಹಿ ತಿನಿಸುಗಳನ್ನು ಖರೀದಿ ಮಾಡುವ ಜೊತೆಯಲ್ಲಿ ’ಫನ್ ಸ್ನಾಪ್ಸ್’ ಎಂಬ ಹೆಸರಿದ್ದ ಪಟಾಕಿ ಡಬ್ಬವೊಂದನ್ನು ಮನೆಗೆ ತಂದುಬಿಟ್ಟಿದ್ದಾರೆ. ಪಾಪರ್ಸ್ ಹೆಸರಿನ ಸಣ್ಣ ಪಟಾಕಿಗಳು ಈ ಡಬ್ಬದಲ್ಲಿ ಇದ್ದು, ಅವುಗಳನ್ನು ಬಾಯಲ್ಲಿ ಹಾಕಿಕೊಂಡ ಲಿಸಾ, ಅದನ್ನು ಅಗೆಯಲು ಆರಂಭಿಸುತ್ತಲೇ, ಬಾಯಲ್ಲಿ ಸುಟ್ಟುಹೋಗಿವೆ.