ಮೊದಲ ಬಾರಿ ವಿಮಾನದಲ್ಲಿ ಕೂರುವ ಅನುಭವವೇ ವಿಶಿಷ್ಟ ಮತ್ತು ರೋಮಾಂಚನ. ಅದರಲ್ಲೂ ವಿಮಾನ ಹಾರುವ ಮುನ್ನ ಹಾಗೂ ಇಳಿಯುವ ಮುನ್ನ ಒಂದು ರೀತಿಯ ದಿಗಿಲು ಇದ್ದೇ ಇರುತ್ತದೆ. ಒಬ್ಬೊಬ್ಬರ ಅನುಭವ ಒಂದೊಂದು ರೀತಿಯದ್ದು.
ಆದರೆ, ಇಲ್ಲೊಬ್ಬಾಕೆ ನಿಲ್ದಾಣಕ್ಕೆ ವಿಮಾನ ಬಂದಿಳಿದರೂ ಸಹಪ್ರಯಾಣಿಕರು ಬೇಗ ಬೇಗ ಇಳಿಯುತ್ತಿಲ್ಲ, ಸರದಿ ಸಾಲು ನಿಧಾನವಾಗಿ ಸಾಗುತ್ತಿದೆ ಎಂಬ ಬೇಗೆಯಲ್ಲಿ ತುರ್ತು ದ್ವಾರ ತೆಗೆದುಕೊಂಡು ನುಸುಳಿದ್ದು, ಸೆಖೆ ತಾಳಲಾರದೆ ಲೋಹದ ಹಕ್ಕಿಯ ರೆಕ್ಕೆಯ ಮೇಲೆ ವಾಯುವಿಹಾರ ನಡೆಸಿದ್ದಾಳೆ.
ಬೋಯಿಂಗ್ 737-86N ವಿಮಾನದಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಟರ್ಕಿಯಿಂದ ಬಂದ ಮಹಿಳೆ ಉಕ್ರೇನ್ ನಲ್ಲಿ ಈ ಹೈಡ್ರಾಮಾ ನಡೆಸಿದ್ದಾಳೆ. ಇಡೀ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಇಳಿದಿದ್ದರೂ ಈಕೆಯ ವಿಹಾರ ಮಾತ್ರ ಮುಗಿದಿರಲಿಲ್ಲ.
ವಿಮಾನ ಇಳಿದ ನಂತರ ಇದನ್ನು ಕಂಡು ಆಶ್ಚರ್ಯ ಮತ್ತು ಗಾಬರಿಯಾದ ಸಹಪ್ರಯಾಣಿಕರಲ್ಲಿ ಒಬ್ಬರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಸಂಬಂಧಿಸಿದವರ ಗಮನಕ್ಕೂ ತಂದಿದ್ದಾರೆ.
ತಾಯಿಯ ಈ ವರ್ತನೆ ಕಂಡು ಬೆರಗಾದ ಮಕ್ಕಳೂ, ಆಕೆ ತನ್ನ ತಾಯಿ ಎಂಬುದನ್ನು ಹೇಳಿಕೊಂಡಿದ್ದಾರೆ. ಆಕೆ ನಾರ್ಕೋಟಿಕ್ ಪರೀಕ್ಷೆ ಮಾಡಿದ್ದು, ಮದ್ಯವನ್ನಾಗಲೀ, ಮಾದಕದ್ರವನ್ನಾಗಲೀ ಸೇವಿಸಿರಲಿಲ್ಲ. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತನ್ನ ಬಾಧೆ ಹೇಳಿಕೊಂಡಿದ್ದಾಳೆ. ಉಕ್ರೇನ್ ಅಂತಾರಾಷ್ಟ್ರಿಯ ವಿಮಾನ ಪ್ರಯಾಣ ಮಾಡದಂತೆ ಆಕೆಗೆ ನಿರ್ಬಂಧ ವಿಧಿಸಿದೆ.