ಜಾಗತಿಕ ಪಾರಂಪರಿಕ ತಾಣವೊಂದರಲ್ಲಿ ವೀಕ್ಷಕರೊಬ್ಬರ ಬೇಜವಾಬ್ದಾರಿ ವರ್ತನೆಯಿಂದ ನೂರಾರು ಪ್ರವಾಸಿಗರು ಬೇಸರಗೊಂಡ ವಿದ್ಯಮಾನ ಮೆಕ್ಸಿಕೋದಲ್ಲಿ ಜರುಗಿದೆ.
ನೂರಾರು ಜನರ ಸಮ್ಮುಖದಲ್ಲೇ, ಮಾಯನ್ ಪಿರಮಿಡ್ ಸ್ಮಾರಕದ ಮೆಟ್ಟಿಲುಗಳನ್ನು ನಿಯಮಾವಳಿ ಮೀರಿ ಹತ್ತಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಘಟನೆಯ ವಿಡಿಯೋವನ್ನು ಅಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಕೆಲವರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಮೆಕ್ಸಿಕೋದ ಯುಕಾಟನ್ ರಾಜ್ಯದಲ್ಲಿರುವ ಚಿಚೆನ್ ಇಟ್ಜಾ ಪ್ರಾಚ್ಯ ಸ್ಮಾರಕಗಳ ಪ್ರದೇಶದಲ್ಲಿ ಜನವರಿ 3ರಂದು ಈ ಘಟನೆ ಜರುಗಿದೆ. ’ಎಲ್ ಕ್ಯಾಸ್ಟಿಲೋ’ ಎಂದು ಕರೆಯಲ್ಪಡುವ ಈ ಪ್ರಾಚೀನ ಪಿರಮಿಡ್‌ಅನ್ನು ಕುಕುಲ್ಕಾನ್ ದೇವಸ್ಥಾನ ಎಂದು ಕರೆಯಲಾಗುತ್ತದೆ. 98 ಅಡಿ ಎತ್ತರವಿರುವ ಈ ದೇವಸ್ಥಾನದ ಕಡಿದಾದ ಮೆಟ್ಟಿಲುಗಳನ್ನು ಏರುವುದನ್ನ ನಿಷೇಧಿಸಲಾಗಿದೆ. ಮದ್ಯದ ಮತ್ತಿನಲ್ಲಿದ್ದ ಮಹಿಳೆ ಹೀಗೆ ಮಾಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.