ಲಂಡನ್: ಇಂಗ್ಲೆಂಡ್ ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಫೋಟೋ ಕಳೆದ ವಾರಾಂತ್ಯದಲ್ಲಿ ಗೂಗಲ್‌ನಿಂದ ಮಾಯವಾಗಿಹೋಗಿತ್ತು. ಸರ್ಚ್ ಇಂಜಿನ್‌ನಲ್ಲಿ ‘ವರ್ಡ್ ವಾರ್ -2 ಸೆಕೆಂಡ್ ಲೀಡರ್ಸ್’ (ಎರಡನೇ ವಿಶ್ವ ಯುದ್ಧದ ನಾಯಕರು) ಎಂದು ಹುಡುಕಿದಲ್ಲಿ ಚರ್ಚಿಲ್ ಅವರ ಫೋಟೋ ಇರುವ ಜಾಗದಲ್ಲಿ ಒಂದು ಕಪ್ಪು ಬಾಕ್ಸ್ ಕಂಡುಬರುತ್ತಿತ್ತು ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿದ್ಯಮಾನವನ್ನು ಹಂಚಿಕೊಂಡಿದ್ದಾರೆ.
ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನ ಹತ್ಯೆಯ ಬಳಿಕ ವಿಶ್ವದಾದ್ಯಂತ ನಡೆಯುತ್ತಿರುವ ‘ ಬ್ಲಾಕ್ ಲೈವ್ಸ್ ಮ್ಯಾಟರ್’ ಹೋರಾಟದಿಂದ ಗೂಗಲ್‌ನಲ್ಲಿ ನಡೆದ ಸಣ್ಣ ಘಟನೆ ಈಗ ಮಹತ್ವ ಪಡೆದಿದ್ದು, ಅಂತರ್ಜಾಲದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವರ್ಣಭೇದ ನೀತಿ ವಿರೋಧಿಗಳು, ನಾಯಕರ ಪ್ರತಿಮೆಗಳ ಎದುರು ಲಂಡನ್ ನಲ್ಲೂ ಹೋರಾಟ ನಡೆಸಿದ್ದಾರೆ. ಅಮೆರಿಕಾದಲ್ಲಿ ಕೆಲವು ನಾಯಕರ ಪ್ರತಿಮೆಗಳನ್ನು ಒಡೆದು ಹಾಕಲಾಗಿದೆ. ಅದರಂತೆ ಲಂಡನ್ ನಲ್ಲೂ ನಾಯಕರ ಪ್ರತಿಮೆಗಳಿಗೆ ಅಪಾಯವಿದೆ ಎಂದು ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಈ ನಡುವೆ ಭಾನುವಾರ ಗೂಗಲ್ ಟ್ವಿಟರ್ ಮೂಲಕ ಈ ವಿದ್ಯಮಾನದ ಕುರಿತು ಸ್ಪಷ್ಟನೆ ನೀಡಿದೆ. ‘ವಿನ್ಸ್ಟನ್ ಚರ್ಚಿಲ್ ಅವರ ಫೋಟೋ ಕಾಣಿಸದೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಅಟೊಮೆಟಿಕ್ ಅಪ್ ಡೇಟ್ ಆಗುತ್ತಿರುವಾಗ ಕೆಲ ಫೋಟೋಗಳು ಕೆಲವು ಬಾರಿ ಕಾಣಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಆದದ್ದಲ್ಲ’ ಎಂದು ಕ್ಷಮೆ ಕೇಳಿದೆ.