ಪೇಶಾವರ: ಧರ್ಮ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಅಮೆರಿಕಾದ ಪ್ರಜೆಯೊಬ್ಬನನ್ನು ಪಾಕಿಸ್ತಾನ ಕೋರ್ಟ್ ನಲ್ಲಿ ನ್ಯಾಯಾಧೀಶರ ಎದುರೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ. ಘಟನೆಯಿಂದ ಪಾಕಿಸ್ತಾನ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಅಹಮದೀಯ ವರ್ಗಕ್ಕೆ ಸೇರಿದ 47 ವರ್ಷದ ತಾಹಿರ್ ಅಹಮದ್ ನಸೀಮ್ ಮೃತರು. ಪೇಶಾವರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಶೌಕತುಲ್ಲಾ ಖಾನ್ ಅವರ ಎದುರೇ ನಸೀಮ್ ಅವರಿಗೆ 6 ಬಾರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಆರೋಪಿಯನ್ನು ಖಾಲೀದ್ ಖಾನ್ ಎಂದು ಗುರುತಿಸಲಾಗಿದೆ. ಭದ್ರತೆ ಇರುವ ನ್ಯಾಯಾಲಯದ ಆವರಣದ ಒಳಗೆ ಹತ್ಯೆಕೋರ ಶಸ್ತ್ರ ಹಿಡಿದು ಪ್ರವೇಶಿಸಿದ್ದು ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
2018 ರವರೆಗೆ ನಸೀಮ್ ಅಮೆರಿಕಾ ನಿವಾಸಿಯಾಗಿದ್ದರು. ಮದರಸಾ ವಿದ್ಯಾರ್ಥಿ ಅವೈಸ್ ಮಲ್ಲಿಕ್ ಜತೆ ಆನ್ ಲೈನ್ ನಲ್ಲಿ ಮಾತನಾಡುವ ವೇಳೆ ತಾನೇ ಪ್ರವಾದಿ ಎಂದು ನಸೀಮ್ ಬಿಂಬಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಮಲ್ಲಿಕ್ ಧರ್ಮ ನಿಂದನೆ ದೂರು ನೀಡಿದ್ದರು. ನಂತರ ನಸೀಮ್ ಅವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನದಲ್ಲಿ ಧರ್ಮ ನಿಂದನೆ ದೊಡ್ಡ ಅಪರಾಧ. ಧರ್ಮ ನಿಂದನೆ ಮಾಡಿದವರನ್ನು ಸಾರ್ವಜನಿಕರೇ ಹೊಡೆದು ಸಾಯಿಸುತ್ತಾರೆ. ಅಷ್ಟೇ ಅಲ್ಲ, ಕಠಿಣ ಕಾನೂನುಗಳೂ ಇವೆ. ಆದರೆ, ತಾಹಿರ್ ನಸೀಮ್ ಕೊಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ತಲೆತಗ್ಗಿಸುವಂತೆ ಮಾಡಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಅಮೆರಿಕ ಸಹ ಟ್ವೀಟ್ ಮಾಡಿ “ಶೇಮ್ ಫುಲ್” ಎಂದು ಘಟನೆಯನ್ನು ಖಂಡಿಸಿದೆ.
https://twitter.com/voice_minority/status/1288725314949066752?ref_src=twsrc%5Etfw%7Ctwcamp%5Etweetembed%7Ctwterm%5E1288725314949066752%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwho-was-tahir-naseem-and-why-was-he-shot-dead-inside-a-court-room-in-pakistan-2744327.html