ನಮ್ಮಲ್ಲಿಯ ಕೌನ್ ಬನೇಗಾ ಕರೋಡ್‌ಪತಿಯಂತೆ ಬ್ರಿಟನ್‌ನ Who wants to be a Millionaire (UK) ಕಾರ್ಯಕ್ರಮದ ಇತ್ತೀಚಿನ ಅವತರಣಿಕೆಯೊಂದರಲ್ಲಿ ಭಾಗಿಯಾಗಿದ್ದ ಸ್ಫರ್ಧಿಯೊಬ್ಬರು ಹಾಗೂ ಅವರ ಮಡದಿ ನಡುವಿನ ವಿವಾದವೊಂದು ಟೆಲಿವೈಸ್ ಆಗಿದೆ.
ವಿಜ್ಞಾನ ವಿಷಯದ ಶಿಕ್ಷಕರಾದ ಜೆ.ಪಿ. ಮಾರ್ಗನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ’ಫೋನ್ ಆಫ್ ಫ್ರೆಂಡ್’ ಲೈಫ್‌ಲೈನ್ ಬಳಸಿಕೊಂಡಿದ್ದಾರೆ. ಜರ್ಮನ್ ಭಾಷೆಯಲ್ಲಿ ವಾರಾಂತ್ಯದ ದಿನಗಳನ್ನು ಕಂಡುಹಿಡಿಯಬೇಕಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂದು ತನ್ನ ಮಡದಿಗೆ ಕರೆ ಮಾಡಲು ನಿರ್ಧರಿಸಿದ್ದಾರೆ ಮಾರ್ಗನ್. ಅವರ ಪತ್ನಿ ಜರ್ಮನಿಯಲ್ಲಿ ವಾಸಿಸುತ್ತಿದ್ದರು.
ಆದರೆ ಮಡದಿಯಿಂದ ಉತ್ತರ ಕಂಡುಕೊಳ್ಳಲು ಹೋದ ಮಾರ್ಗನ್ ತಲೆಯಲ್ಲಿ ಒಂದಷ್ಟು ಪ್ರಶ್ನೆಗಳು ಏಳಲು ಆರಂಭಿಸಿದವು. ಮಡದಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಆ ಕಡೆಯಿಂದ ಪುರುಷನ ದನಿ ಕೇಳಿದೆ. ಎರಡನೇ ಬಾರಿ ಕರೆ ಮಾಡಿದಾಗ ಮಾರ್ಗನ್ ಪತ್ನಿ ಎಲಿಜೆಬೆತ್ ಕರೆ ಸ್ವೀಕರಿಸಿದ್ದಾರೆ. ಶೋನ ಹೋಸ್ಟ್ ಜೆರೆಮಿ ಕ್ಲಾರ್ಕ್‌ಸನ್ ಇದರಿಂದ ಖುದ್ದು ಸ್ಪರ್ಧಿಯಷ್ಟೇ ಚಕಿತಗೊಂಡಿದ್ದಾರೆ. ಕರೆ ಮಾಡಿದ ವೇಳೆ ತಾವು ಯಾರೊಟ್ಟಿಗಾದರೂ ಇದ್ದಿರಾ? ಎಂದು ಖುದ್ದು ಎಲೆಜೆಬೆತ್‌ರನ್ನು ಜೆರಮಿ ಕೇಳಿದ್ದಾರೆ.
ಇದಾದ ಬಳಿಕ 30 ಸೆಕೆಂಡ್‌ಗಳ ಸಮಯದ ಮಿತಿಯೊಳಗೆ ಪ್ರಶ್ನೆಯನ್ನು ತಮ್ಮ ಮಡದಿಗೆ ಕೇಳಿದ ಮಾರ್ಗನ್‌ಗೆ ಆ ಕಡೆಯಿಂದ ಉತ್ತರ ಸಿಕ್ಕಿದೆ. ರಿಯಾಲಿಟಿ ಶೋನಲ್ಲಿ ದುಡ್ಡು ಗೆದ್ದುಕೊಂಡು ಖುಷಿಯಾಗಿ ಹೋಗಲು ಬಂದಿದ್ದ ಮಾರ್ಗನ್ ತಲೆಯಲ್ಲಿ ನೂರಾರು ಪ್ರಶ್ನೆಗಳು ಏಳುವಂತಾಗಿದೆ ಎಂದು ಟ್ವಿಟರ್‌ನಲ್ಲಿ ಈ ಶೋನ ತುಣುಕನ್ನು ನೋಡಿದ ನೆಟ್ಟಿಗರು ಮಾತನಾಡಿಕೊಳ್ಳುವಂತಾಗಿದೆ.