ಕೊರೊನಾ ವೈರಸ್ ಗಾಳಿಯಿಂದಲೂ ಹರಡಲಿದೆ ಎನ್ನುವುದನ್ನು ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ವರದಿಗಳನ್ನು ಒಪ್ಪಿಕೊಂಡಿದೆ. ಆದರೆ, ವೈರಸ್ ಗಾಳಿಯಿಂದ ಹರಡುತ್ತದೆ ಎಂದು ಹೇಳಲು ಸಂಶೋಧನೆ ವಿಷಯದಲ್ಲಿ ಇನ್ನೂ ಹೆಚ್ಚಿನ ಪುರಾವೆಗಳು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸ್ಪರ್ಶ, ಕೆಮ್ಮುವ, ಸೀನುವ ಕಣಗಳಿಂದ ಸೋಂಕು ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಸಂಶೋಧಕರು ಕಂಡುಕೊಂಡ ಮಾಹಿತಿಯಂತೆ ಗಾಳಿಯಿಂದ ಕೂಡ ಕೊರೊನಾ ವೈರಸ್ ಹರಡುತ್ತದೆ ಎನ್ನುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಬದಲಿಸುವಂತೆ 200ಕ್ಕೂ ಅಧಿಕ ಮಂದಿ ವಿಜ್ಞಾನಿಗಳು, ತಜ್ಞರು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತದೆ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದು ಸಂಶೋಧನೆಯ ಇನ್ನೂ ಹೆಚ್ಚಿನ ಪುರಾವೆ ಒದಗಿಸುವಂತೆ ಕರೆ ನೀಡಿದೆ. ರೆಸ್ಟೋರೆಂಟ್, ಫಿಟ್ನೆಸ್ ಸೆಂಟರ್ ಸೇರಿದಂತೆ ಹಲವು ಸ್ಥಳಗಳಲ್ಲಿ ಕೊರೊನಾ ಹರಡುವ ಸಾಧ್ಯತೆ ಇದೆ. ಅಂತಹ ಕಡೆ ಹೆಚ್ಚಿನ ಸಂಶೋಧನೆ ನಡೆಸಲು ಸೂಚನೆ ನೀಡಲಾಗಿದೆ.
ಕೊರೊನಾ ವೈರಸ್ ಸೋಂಕಿತರ ಸಂಪರ್ಕದ ಮೂಲಕ ಹರಡುತ್ತದೆ. ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದಾಗ, ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನುವಾಗ, ಮಾತನಾಡುವಾಗ ಅಥವಾ ಹಾಡುವಾಗ ಲಾಲಾರಸ ಕಣಗಳು ಬಿಡುಗಡೆಯಾಗುತ್ತದೆ. ಲಕ್ಷಣ ರಹಿತ ಜನರಿಂದಲೂ ಕೊರೊನಾ ವೈರಸ್ ಹರಡಬಹುದು. ಗಾಳಿಯಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗೆ ಸಲಹೆ ನೀಡಲಾಗಿದೆ.