ಕ್ಷಯ, ಸಿಡುಬು, ದಡಾರದಂತಹ ರೋಗಗಳೂ ಗಾಳಿಯ ಮೂಲಕ ಸಲೀಸಾಗಿ ಹರಡಬಲ್ಲದು ಹಾಗೂ ಬಹುಮಂದಿಗೆ ಬಾಧೆ ನೀಡುತ್ತದೆ. ಇನ್ನು ಈ ಕೊರೊನಾ ವೈರಾಣು ಎಷ್ಟು ದೂರದವರೆಗೆ ಗಾಳಿಯಲ್ಲಿ ಹರಡಬಲ್ಲದು ? ಎಷ್ಟು ಜನರನ್ನು ಬಾಧಿಸಬಲ್ಲದು ಎಂಬುದು ಗೊಂದಲವಾಗಿಯೇ ಉಳಿದಿದೆ.
ಗಾಳಿಯಲ್ಲೂ ಕೊರೊನಾ ವೈರಾಣು ಹರಬಹುದು ಮಬ ಕಾರಣಕ್ಕಾಗಿಯೇ ಪರಸ್ಪರ ಕನಿಷ್ಠ 6 ಅಡಿಗಳ ಅಂತರ ಇರಬೇಕು ಎಂಬ ಅಂದಾಜು ನಿಯಮ ಮಾಡಲಾಗಿದೆ. ಕೆಮ್ಮಿದಾಗ, ಸೀನಿದಾಗ ಅಷ್ಟೇ ಏಕೆ ಮಾತನಾಡಿದಾಗಲೂ ಎಂಜಲು, ಉಗುಳಿನ ಕಣಗಳ ಮೂಲಕ ವೈರಾಣು ಹರಡುವ ಅಪಾಯ ಇದೆ.
ಹೀಗೆ ಎಷ್ಟು ದೂರ ಹರಡಬಲ್ಲದು ? ಕಣ್ಣಿಗೆ ಕಾಣುವ ದಪ್ಪ ಕಣಗಳೇ ಅಲ್ಲೇ ಉದುರಿ ಬೀಳಬಹುದು. ಆದರೆ, ಕಣ್ಣಿಗೆ ಕಾಣದ ಸಣ್ಣ ಕಣಗಳು ವಾತಾವರಣದಲ್ಲಿ ಬಹಳ ಹೊತ್ತು ಸಕ್ರಿಯವಾಗಿರುತ್ತವೆ, ಉಸಿರಾಟದ ಮೂಲಕ ಮನುಷ್ಯನ ದೇಹ ಸೇರುತ್ತವೆ ಎಂಬ ವಾದವೂ ಇದೆ.
ಇಷ್ಟಾದರೂ ಅಮೆರಿಕಾದ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರ (ಸಿ.ಡಿ.ಸಿ) ಗಾಳಿಯ ಮೂಲಕ ಹರಡುವ ಭೀತಿ ಬಹಳ ಕಡಿಮೆ ಎಂಬ ವಾದ ಮುಂದಿಟ್ಟಿದ್ದು, ಅನೇಕ ವಿಜ್ಞಾನಿಗಳು ವ್ಯತಿರಿಕ್ತ ವಾದ ಮಂಡಿಸಿದ್ದಾರೆ. ಗಾಳಿಯ ಮೂಲಕ ಹರಡುವ ವಿಚಾರವನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದು ಎಚ್ಚರಿಸಿದ್ದಾರೆ.