ಓಹಿಯೋ: ಒಡಹುಟ್ಟಿದವರನ್ನು ಬೇರೆ ಮಾಡಬಾರದು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಐವರು ಒಡಹುಟ್ಟಿದವರನ್ನು ದತ್ತು ಪಡೆದು ಸುದ್ದಿಯಾಗಿದ್ದಾರೆ. ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ.
ಅಮೆರಿಕಾದ ಓಹಿಯೋದ ರಾಬರ್ಟ್ ಕಾರ್ಟರ್ ಎಂಬ 29 ವರ್ಷದ ವ್ಯಕ್ತಿ 2018 ರ ಡಿಸೆಂಬರ್‌ನಲ್ಲಿ ಮೂವರು ಗಂಡು ಮಕ್ಕಳನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದು, ಈ ಬಾರಿ ಅಕ್ಟೋಬರ್‌ನಲ್ಲಿ ಅವರ ಇಬ್ಬರು ಸಹೋದರಿಯರನ್ನೂ ಅಧಿಕೃತವಾಗಿ ದತ್ತು ಪಡೆದಿದ್ದಾರೆ.
ಮೆರಿಯೋನಾ, ರಾಬರ್ಟ್ ಜೆಆರ್, ಮಕಾಲೆ, ಜಿಯೋವಿನ್ನಿ, ಕಿಯೋಂಟೈ ಎಂಬ ಐವರು ಈಗ ರಾಬರ್ಟ್ ಕಾರ್ಟರ್ ಅವರ ಅಧಿಕೃತ ಮಕ್ಕಳಾಗಿದ್ದಾರೆ. ಅವರು ಈಗ ಮಕ್ಕಳನ್ನು ಸಾಕಲು ದೊಡ್ಡ ಮನೆ ಹುಡುಕುತ್ತಿದ್ದು, ಗೋ ಫಂಡ್ ಮಿ ಎಂಬ ಆನ್‌ಲೈನ್ ಪೇಜ್‌ನ್ನು ಪ್ರಾರಂಭಿಸಿ ಹಣ ಒಟ್ಟುಗೂಡಿಸುತ್ತಿದ್ದಾರೆ. ಇದುವರೆಗೆ 92,370 ಡಾಲರ್ ಹಣ ಸಂಗ್ರಹಿಸಿದ್ದು, 1.5 ಲಕ್ಷ ಡಾಲರ್ ಹಣ ಸಂಗ್ರಹಿಸುವ ಗುರಿ ಹೊಂದಿದ್ದಾರೆ.
ರಾಬರ್ಟ್ ಕಾರ್ಟರ್ 12 ವರ್ಷದ ಹಿಂದೆ ಒಂದು ಅನಾಥಾಶ್ರಮದಲ್ಲಿ ಬೆಳೆದಿದ್ದರು. ಆಗ ಅವರು 8 ಒಡ ಹುಟ್ಟಿದವರನ್ನು ಬಿಟ್ಟು ಬರಬೇಕಾಗಿತ್ತು. ತನಗಾದ ಕೆಟ್ಟ ಅನುಭವ ಈ ಮಕ್ಕಳಿಗೆ ಆಗಬಾರದು ಎಂದು ಅವರು ನಿರ್ಧರಿಸಿದ್ದರು.
“ಮೂವರು ಮಕ್ಕಳನ್ನು ಅನಾಥಾಶ್ರಮದಿಂದ ಕರೆ ತರುವಾಗ ಅವರು ಪರಸ್ಪರ ಅಪ್ಪಿ ಅಳಲಾರಂಭಿಸಿದರು. ನಾನು ಎಲ್ಲರನ್ನೂ ದತ್ತು ಪಡೆಯುವುದಾಗಿ ಅಂದೇ ಘೋಷಿಸಿದೆ” ಎನ್ನುತ್ತಾರೆ ಅವರು.