ಪ್ರೀತಿಸಿದ ಹುಡುಗಿಗೆ ವಿಶಿಷ್ಟವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂದು ಬಯಸಿದ್ದವನ ಮನೆಗೆ ಬೆಂಕಿ ಬಿದ್ದು ಸುಟ್ಟು ಕರಕಲಾದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.
ಇಲ್ಲಿನ ಶೆಫ್ಪೀಲ್ಡ್ ಪ್ರಾಂತ್ಯದ ಯುವಕನೊಬ್ಬ ತನ್ನ ಹುಡುಗಿಗೆ ಡಿಫರೆಂಟ್ ಆಗಿ, ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಬೇಕೆಂದು ನಿಶ್ಚಯಿಸಿದ್ದಾನೆ.
ತನ್ನ ಯೋಜನೆಯಂತೆ ವಾಸವಿದ್ದ ಫ್ಲ್ಯಾಟ್ ನ ಕೋಣೆಯೊಂದರಲ್ಲಿ ನೂರಾರು ಕ್ಯಾಂಡಲ್ ಹಚ್ಚಿಟ್ಟು, ಬಣ್ಣ-ಬಣ್ಣದ ಬಲೂನ್ ಗಳನ್ನು ಕಟ್ಟಿ ಹುಡುಗಿಯನ್ನು ಕರೆತರಲೆಂದು ಹೋಗಿದ್ದಾನೆ.
ಹಿಂದಿರುಗುವುದರಲ್ಲಿ ಫ್ಲ್ಯಾಟ್ ಹೊತ್ತಿ ಉರಿಯುತ್ತಿದ್ದು, ಮೂರು ಅಗ್ನಿಶಾಮಕ ದಳದ ವಾಹನ, ಸಿಬ್ಬಂದಿ ಎಲ್ಲವೂ ಬಂದು ಬೆಂಕಿ ಆರಿಸುತ್ತಾ ನಿಂತಿವೆ.
ಇದನ್ನು ಕಂಡ ಯುವಕ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬಳಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಸಕಾರಣವನ್ನೂ ನೀಡಿದ್ದಾನೆ. ಆತನಿಗೆ ಎಚ್ಚರಿಕೆ ನೀಡಿ, ಪ್ರೇಮನಿವೇದನೆ ಮಾಡಿಕೊಳ್ಳಲು ಬಿಟ್ಟಿದ್ದಾರೆ.
ಸುಟ್ಟು ಕರಕಲಾದ ಫ್ಲ್ಯಾಟ್ ನಲ್ಲೇ ಆತ ಪ್ರಪೋಸ್ ಮಾಡಿದ್ದು, ಅಂದುಕೊಂಡಿದ್ದಕ್ಕಿಂತ ಅವಿಸ್ಮರಣೀಯ ದಿನವಾಯಿತು ಎಂದುಕೊಂಡಿದ್ದಾನೆ. ಆದರೆ, ಕ್ಯಾಂಡಲ್ ಗಳನ್ನು ಎಚ್ಚರಿಕೆಯಿಂದ ಬಳಸುವಂತೆ ನಾಗರಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.