ಅತ್ಯಾಧುನಿಕ ವಿನ್ಯಾಸದ ವಾಸ್ತುಶಿಲ್ಪಕ್ಕೆ ಡ್ರ್ಯಾಗನ್ ರಾಷ್ಟ್ರ ಚೀನಾ ಹೆಸರುವಾಸಿಯಾಗಿದೆ. ಇಷ್ಟು ದಿನ ವಿನೂತನ ಶೈಲಿಯ ಕಟ್ಟಡಗಳ ಮೂಲಕ ವಿಶ್ವವನ್ನ ನಿಬ್ಬೆರಗು ಮಾಡಿದ್ದ ಚೀನಾ ಇದೀಗ ಕಟ್ಟಡಗಳಿಗೆ ಚಲನಾ ಶಕ್ತಿಯನ್ನ ನೀಡುವ ಕಲೆಯನ್ನೂ ಕರಗತ ಮಾಡಿಕೊಂಡಿದೆ.
ಚೀನಾದ ಪೂರ್ವ ಹುವಾಂಗ್ಪು ಜಿಲ್ಲೆಯ ಮೂಲಕ ಕಟ್ಟಡ ಹಾದು ಹೋಗಿದ್ದು ಇದನ್ನ ನೋಡಿದ ಶಾಂಘೈ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ . 85 ವರ್ಷಗಳಷ್ಟು ಪುರಾತನ ಕಟ್ಟಡವನ್ನ ನೆಲದಿಂದ ಮೇಲಕ್ಕೆತ್ತಿ ವಾಕಿಂಗ್ ಮಷಿನ್ ಸಹಾಯದಿಂದ ಬೇರೆ ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಐತಿಹಾಸಿಕ ಕಟ್ಟಡಗಳನ್ನ ರಕ್ಷಿಸುವ ಸಲುವಾಗಿ ಚೀನಾ ಈ ವಾಕಿಂಗ್ ಕಟ್ಟಡ ಕಲೆಯನ್ನ ಕಂಡು ಹಿಡಿದಿದೆ. ಕಟ್ಟಡಗಳ ತಳದಲ್ಲಿ ರೊಬೋಟ್ ಮಾದರಿಯ ಕಾಲುಗಳನ್ನ ಅಂಟಿಸಲಾಗುತ್ತೆ. ಈ ಕಾಲುಗಳು ಥೇಟ್ ರೋಬೋಟ್ಗಳ ರೀತಿಯೇ ಚಲಿಸುವ ಮೂಲಕ ಬಹುಮಹಡಿ ಕಟ್ಟಡಗಳನ್ನ ಒಂದು ಪ್ರದೇಶದಿಂದ ಇನ್ನೊಂದೆಡೆ ತಲುಪಿಸುವ ಸಾಮರ್ಥ್ಯ ಹೊಂದಿವೆ .
1935ರಲ್ಲಿ ಶಾಂಘೈನ ಪುರಸಭೆ ಈ ಪ್ರಾಥಮಿಕ ಶಾಲಾ ಕಟ್ಟಡವನ್ನ ನಿರ್ಮಾಣ ಮಾಡಿತ್ತು. ಆದರೆ ಈ ಕಟ್ಟಡವಿದ್ದ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಐತಿಹಾಸಿಕ ಕಟ್ಟಡವನ್ನ ಹಾಳುಗೆಡುವುದು ಬೇಡ ಎಂದು ನಿರ್ಧರಿಸಿದ ಅಧಿಕಾರಿಗಳು ಕಟ್ಟಡವನ್ನೇ ಸ್ಥಳಾಂತರಿಸಿದ್ದಾರೆ. ರೋಬೋಟ್ ಕಾಲುಗಳ ಸಹಾಯದಿಂದ ಈ ಕಟ್ಟಡ 18 ದಿನಗಳ ಅವಧಿಯಲ್ಲಿ 203 ಅಡಿ ದೂರಕ್ಕೆ ಹೋಗಿದೆ.