ಪ್ರಾಣಿಗಳ ಮೇಲಿನ ದೌರ್ಜನ್ಯ ಕೂಡ ನಮ್ಮ ಸಮಾಜದಲ್ಲಿನ ಆತಂಕಕಾರಿ ಅಂಶ. ಇಂತಹ ಘಟನೆಗಳನ್ನು ತೀರಾ ಸಾಮಾನ್ಯ ಎನ್ನುವಂತೆ ಸ್ವೀಕರಿಸುವುದೇ ಹೆಚ್ಚು. ಇಂಡೋನೇಷ್ಯಾದ ಬಾಲಿ ಸಮುದ್ರ ತೀರದಲ್ಲಿ ನಾಯಿಯ ಮೇಲೆ ಅಮಾನವೀಯ ಹಲ್ಲೆ ನಡೆಸಿರುವ ವಿಡಿಯೋ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಸೂರ್ಯಾಸ್ತದ ಸಂಜೆಗತ್ತಲಲ್ಲಿ ದೊಡ್ಡ ಕೋಲು ಹಿಡಿದು ನಾಯಿಯೊಂದನ್ನು ತೀರ ಪ್ರದೇಶದಲ್ಲಿ ಅಟ್ಟಾಡಿಸಿ ಹೊಡೆಯುತ್ತಿರುವ ವಿಡಿಯೋ ಕಂಡು ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ.
ಆತನ ಗುರುತು ಪತ್ತೆ ಹಚ್ಚುವ ಸಲುವಾಗಿ ಹೆಚ್ಚು ಬಾರಿ ವಿಡಿಯೋ ಶೇರ್ ಮಾಡಿದ್ದು, ಬಾಲಿ ಪ್ರಾಣಿ ಕಲ್ಯಾಣ ಸಂಘದ ಸಂಸ್ಥಾಪಕಿ ಜಾನೀಸ್ ಗಿರಾರ್ಡಿ ಎಂಬುವರು ನಾರ್ಥ್ ಕೂಟ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈತ ಹೀಗೆ ನಾಯಿಗಳ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲವಂತೆ. ಇಂತಹ ಕ್ರೂರ ಕೃತ್ಯ ಎಸಗಿರುವುದರ ಹಿಂದೆ ಎರಡು ಪ್ರಮುಖ ಕಾರಣಗಳೂ ಇವೆಯಂತೆ.
ಬಾಲಿ ತೀರದಲ್ಲಿನ ನಾಯಿಗಳಿಗೆ ರೇಬಿಸ್ ಸೋಂಕು ತಗುಲಿದೆ ಎಂಬ ತಪ್ಪು ತಿಳಿವಳಿಕೆ ಹಾಗೂ ಹಿಂದೆ ಯಾವಾಗಲೋ ಒಮ್ಮೆ ನಾಯಿಯೊಂದು ಈತನ ಮೇಲೆ ದಾಳಿ ಮಾಡಿ ಕಚ್ಚಿತ್ತಂತೆ. ಹೀಗಾಗಿ ನಾಯಿಗಳನ್ನು ಕಂಡರೆ ಅಟ್ಟಿಸಿಕೊಂಡು ಹೋಗಿ ದಾಳಿ ಮಾಡುತ್ತಾನೆ ಎಂದು ಜಾಲತಾಣದಲ್ಲೊಬ್ಬರು ಕಮೆಂಟ್ ಮಾಡಿದ್ದಾರೆ. ಪ್ರಾಣಿಪ್ರಿಯರು ಈತನ ಹಿಂದೆ ಬಿದ್ದಿದ್ದಾರೆ.