
ಚಿಕ್ಕ ಮಕ್ಕಳು ಅಥವಾ ಮರಿಗಳು ತಮ್ಮ ಪಾಲಕರನ್ನು ಕಳೆದುಕೊಳ್ಳುವುದು ಅತ್ಯಂತ ದಯನೀಯ ಪರಿಸ್ಥಿತಿ. ತನ್ನ ತಾಯಿಯನ್ನು ಕಳೆದುಕೊಂಡಿದ್ದ ಮರಿ ಆಡು ಆಕೆಯನ್ನು ಮರಳಿ ಸೇರುವ ವಿಡಿಯೋವೊಂದು ತುಂಬಾ ವೈರಲ್ ಆಗಿದೆ. ಕೆಡೆರೆಸಿಯೋ ಎಂಬ ರೆಡಿಟ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, 1.2 ಲಕ್ಷಕ್ಕೂ ಅಧಿಕ ಅಪ್ ವೋಟ್ ಪಡೆದಿದೆ. 1300 ರಷ್ಟು ಕಮೆಂಟ್ ಗಳು ಬಂದಿವೆ.
“ಹೊಂಡದಲ್ಲಿ ಬಿದ್ದಿದ್ದ ಮೇಕೆ ಮರಿಯನ್ನು ಕಂಡೆವು. ಅದನ್ನು ರಕ್ಷಿಸಿ ರಾತ್ರಿಯಿಡೀ ಆರೈಕೆ ಮಾಡಿದೆವು. ನಂತರ ಅದರ ಮಾಲೀಕರನ್ನು ಹುಡುಕುವ ಪ್ರಯತ್ನ ಮಾಡಿದೆವು. ತಲೆಯ ಮೇಲೆ ನಾಮ ಇದ್ದ ಮೇಕೆಗಳ ಗುಂಪೊಂದು ಕಾಣಿಸಿತು. ಮರಿ ಇದೇ ಗುಂಪಿಗೆ ಸೇರಿರಬೇಕು ಎಂಬ ಅಂದಾಜಿನ ಮೇಲೆ ನಾವು ಅದನ್ನು ನೆಲದ ಮೇಲೆ ಬಿಟ್ಟೆವು. ನಂತರ ಕಣ್ಣೀರು ಬರುವಂಥ ಭಾವನಾತ್ಮಕ ಸನ್ನಿವೇಶ ನಡೆಯಿತುʼʼ ಎಂದು ರೆಡಿಟ್ ಬಳಕೆದಾರ ಬರೆದಿದ್ದಾನೆ.
ಇದಕ್ಕೆ ಸಾಕಷ್ಟು ಹೃದಯಸ್ಪರ್ಷಿ ಕಮೆಂಟ್ ಗಳು ಬಂದಿವೆ. “ಪ್ರಾಣಿಗಳು ನಿಮಗೆ ಅಭಿನಂದನೆ ಹೇಳುವುದಿಲ್ಲ. ಆದರೆ, ನಾವು ನಿಮಗೆ ಹೇಳುತ್ತೇವೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, “ನಾನು ಮ್ಯೂಟ್ ಮಾಡಿಕೊಂಡು ವಿಡಿಯೋ ನೋಡಿದೆ. ನಂತರ ಅನ್ ಮ್ಯೂಟ್ ಮಾಡಿ ಮತ್ತೊಮ್ಮೆ ನೋಡಿದೆ. ನನಗೆ ಆಗ ಅಳು ಬಂತು. ಈ ಸನ್ನಿವೇಶ ಭಾವನಾತ್ಮಕತೆಯಿಂದ ಕೂಡಿದೆ ಹಾಗೂ ನೋಡಿ ಮುಗಿದ ನಂತರ ಸಮಾಧಾನ ನೀಡುತ್ತದೆ” ಎಂದಿದ್ದಾರೆ.