ಈಜಿಪ್ಟ್ ಎಂದಾಕ್ಷಣ ನೆನಪಾಗುವುದೇ ಪಿರಮಿಡ್ ಗಳು. ಈ ಪಿರಮಿಡ್ ನಲ್ಲಿನ ಮಮ್ಮಿಗಳ ಕುರಿತ ಕುತೂಹಲ ಬಗೆದಷ್ಟೂ ಆಳ. ಪ್ರಾಚೀನ ನಾಗರಿಕತೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ಪಿರಮಿಡ್ ಗಳು ಇಂದಿಗೂ ಪುರಾತತ್ತ್ವ ಅಧ್ಯಯನಕಾರರಿಗೆ ಪ್ರಮುಖ ಆಕರ.
ಇದೀಗ ಈಜಿಪ್ಟಿನ ಅತಿ ದೊಡ್ಡ ಹಾಗೂ ಪುರಾತನ ಸ್ಮಶಾನ ಇರುವ ಸಕ್ವೇರ ಎಂಬಲ್ಲಿ 3 ದೊಡ್ಡ ಬಾವಿಗಳು ಪತ್ತೆಯಾಗಿದ್ದು, ಅದರಲ್ಲಿ 59 ಶವಪೆಟ್ಟಿಗೆಗಳು ಸಿಕ್ಕಿವೆ.
ಪುರಾತತ್ತ್ವ ಶಾಸ್ತ್ರಜ್ಞರ ಪ್ರಕಾರ ಬಾವಿಯೊಳಗೆ 13 ಶವಪೆಟ್ಟಿಗೆ ಇದೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಬಗೆದಷ್ಟು ಆಳ ಎಂಬಂತೆ ಇದರೊಂದಿಗೆ ಇನ್ನೂ 14 ಶವಪೆಟ್ಟಿಗೆ ಸಿಕ್ಕಿತು. ಕೊನೆಗೆ ಲೆಕ್ಕ ಹಾಕಿ ನೋಡಿದರೆ, ಬರೋಬ್ಬರಿ 59 ಶವಪೆಟ್ಟಿಗೆಗಳು ಪತ್ತೆಯಾಗಿದ್ದವು.
ಪುರಾತತ್ತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ಶವಪೆಟ್ಟಿಗೆಗಳನ್ನು ನೂರಾರು ಜನರ ಸಮ್ಮುಖದಲ್ಲಿ ತೆರೆಯಲಾಗಿದ್ದು, ಬಹುತೇಕ ಪಾದ್ರಿಗಳು, ಶ್ರೀಮಂತರ ಹೆಣಗಳೇ ಅದರಲ್ಲಿದ್ದವು.
ಕೆಲವು ಕಲ್ಲಿನಿಂದ ತಯಾರಿಸಿದ್ದ ಶವಪೆಟ್ಟಿಗೆಗಳಾದರೆ, ಇನ್ನುಳಿದ ಬಹುತೇಕ ಶವಪೆಟ್ಟಿಗೆಗಳು ಮರದಿಂದ ಸಿದ್ಧಪಡಿಸಿದ್ದಾಗಿದ್ದವು. ಈ ಪೈಕಿ ಒಂದು ಶವಪೆಟ್ಟಿಗೆಯು 2500 ವರ್ಷ ಹಳೆಯದಾದ್ದು ಎಂದು ಅಂದಾಜಿಸಿದ್ದು, ಅದರಲ್ಲಿನ ಶವವನ್ನು ಬಟ್ಟೆಯಲ್ಲಿ ಸುತ್ತಿಡಲಾಗಿತ್ತು.
2500 ವರ್ಷಗಳಷ್ಟು ಹಳೆಯದಾದ ಶವಪೆಟ್ಟಿಗೆಯನ್ನು ಇದೇ ಮೊದಲ ಬಾರಿಗೆ ತೆರೆದು ನೋಡಿದ್ದು, ಇದನ್ನು ವಿಡಿಯೋ ಮಾಡಿಕೊಳ್ಳಲಾಗಿದೆಯಲ್ಲದೆ, ಜಾಲತಾಣದಲ್ಲಿ ಹರಿಬಿಡಲಾಗಿದೆ. ಲಕ್ಷಾಂತರ ಜನರು ವೀಕ್ಷಿಸಿದ್ದು, ಸದ್ಯಕ್ಕೆ ಈ ಶವಪೆಟ್ಟಿಗೆಗಳನ್ನು ಗಿಜಾದಲ್ಲಿರುವ ನ್ಯೂ ಗ್ರ್ಯಾಂಡ್ ಈಜಿಪ್ಟಿಯನ್ ಮ್ಯೂಸಿಯಮ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.