ಕೊರೊನಾ ಕಾಟದಿಂದಾಗಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೊಡಲಿಪೆಟ್ಟು ಬಿದ್ದಿದ್ದು, ಎಲ್ಲೆಡೆ ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೀಗ ಅಮೆರಿಕಾದ ಏರ್ ಲೈನ್ಸ್ ವಿಮಾನಯಾನ ಸಿಬ್ಬಂದಿಯ ಸರದಿ. ಸಂಸ್ಥೆ ತನ್ನ ಸೇವೆ ಸ್ಥಗಿತಗೊಳಿಸಿದ್ದು, 40 ಸಾವಿರಕ್ಕೂ ಅಧಿಕ ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.
ಕರ್ತವ್ಯದ ಕೊನೆಯ ದಿನ ವಿಮಾನ ಲ್ಯಾಂಡಿಂಗ್ ವೇಳೆ ಕಡೆಯದಾಗಿ ಪ್ರಯಾಣಿಕರಿಗೆ ಘೋಷಣೆ ಮಾಡುವಾಗ ಬಿಕ್ಕಿ ಬಿಕ್ಕಿ ಅತ್ತ ಬ್ರ್ಯುಯನ್ನಾ ರೋಸ್, ಪ್ರಯಾಣಿಕರನ್ನೂ ಕಣ್ಣಂಚಲ್ಲೂ ನೀರು ಬರುವಂತೆ ಮಾಡಿಬಿಟ್ಟರು.
ಇದು ತನ್ನ ಕೊನೆಯ ಸೇವೆ, ಕೊನೆಯ ಘೋಷಣೆ ಎಂದ ಆಕೆ, ನನ್ನ ಪದವಿ ಶಿಕ್ಷಣ ಮುಗಿಸಿ ಕಾಲೇಜಿನಿಂದ ಹೊರಬರುವಾಗ ಎಷ್ಟು ದುಃಖಪಟ್ಟಿದ್ದೆನೋ ಅಷ್ಟೇ ದುಃಖ ಈಗಾಗುತ್ತಿದೆ. ಅತಿ ಹೆಚ್ಚು ಪ್ರೀತಿಸಿದ ಕೆಲಸ ಇದು. ಈ ಕೆಲಸ ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ ಎನ್ನುವಾಗ ಗದ್ಗದಿತಳಾಗಿ ನುಡಿಯುತ್ತಾಳೆ. ತನ್ನ ಕಾರ್ಯ ಮುಗಿದ ನಂತರ ಅಲ್ಲಿದ್ದವರೆಲ್ಲರೂ ಚಪ್ಪಾಳೆ ತಟ್ಟಿ ಆಕೆಯನ್ನು ಹುರಿದುಂಬಿಸಿ ಬೀಳ್ಕೊಡುತ್ತಾರೆ.
ಒಂದು ಅಂದಾಜಿನ ಪ್ರಕಾರ ಕಳೆದ 6 ತಿಂಗಳಲ್ಲಿ ಅಮೆರಿಕಾ ಏರ್ ಲೈನ್ಸ್ 5 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದರೆ, ಯುನೈಟೆಡ್ ಏರ್ ಲೈನ್ಸ್ ಗೆ 3.3 ಶತಕೋಟಿ ಡಾಲರ್ ನಷ್ಟವಾಗಿದೆ. ಜಿನೀವಾ ಮೂಲದ ಅಂತಾರಾಷ್ಟ್ರೀಯ ವಾಯುಯಾನ ಸಂಘಟನೆ ಐಎಟಿಎ ಪ್ರಕಾರ, ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳಲು 2024 ರವರೆಗೆ ಅವಕಾಶ ಬೇಕಾಗಬಹುದು ಎಂದು ಅಂದಾಜಿಸಿದೆ.