76 ವರ್ಷದ ಅಜ್ಜಿಯೊಬ್ಬಳು ಚಲಿಸುವ ಆಟಿಕೆ ಮೇಲೆ ಕುಳಿತು ಬ್ಯುಸಿ ರಸ್ತೆಯಲ್ಲಿ ಹೊರಟ ವಿಡಿಯೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಹಾಗೆ ಮಾಡಲು ಕಾರಣ ಕೇಳಿದ ಜನ ಮರುಗಿದ್ದಾರೆ.
ಪೂರ್ವ ಚೀನಾದ ಜೈಗ್ಸು ಪ್ರಾಂತ್ಯದ ಸುಜೌ ನಗರದ ಎಂಎಸ್ ಹೌ ಎಂಬ ಮಹಿಳೆ ತನ್ನ ಕೆಲಸದ ಸ್ಥಳದಿಂದ ಮನೆಗೆ ತೆರಳಲು ವಾಹನ ದಟ್ಟಣೆಯ ಸ್ಥಳದಲ್ಲಿ ಡ್ರ್ಯಾಗನ್ ರೀತಿಯ ಆಟಿಕೆಯನ್ನು ಬಳಸಿದ್ದರು.
ಪೊಲೀಸರು ಆಕೆಯನ್ನು ವಿಚಾರಿಸಿದಾಗ. “ನಾನು ಕ್ರೀಡಾಂಗಣದ ಗಾರ್ಡನ್ ಹಾಗೂ ಆಟಿಕೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ. ನನಗೆ ಕಾಲು ನೋವು. ಸಾರ್ವಜನಿಕ ಸಾರಿಗೆಯಲ್ಲಿ ಮನೆಗೆ ತೆರಳುವುದು ಕಷ್ಟ. ಮನೆಯವರು ಸದಾ ಬ್ಯುಸಿ. ನನಗೆ ಲಿಫ್ಟ್ ಕೊಡಲು ಯಾರೂ ಇಲ್ಲದ ಕಾರಣ ಈ ಯೋಚನೆ ಮಾಡಿದೆ” ಎಂದು ಹೇಳಿದ್ದಾರೆ.
ವಾಹನ ದಟ್ಟಣೆ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿ ಅಪಘಾತವಾಗುವ ಸಾಧ್ಯತೆ ಇರುವುದರಿಂದ ಮತ್ತೆ ಅದನ್ನು ಬಳಸದಂತೆ ತಾಕೀತು ಮಾಡಿದ್ದಾಗಿ ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.