ಸಾಮಾನ್ಯವಾಗಿ ಬಾವಲಿಗಳು ಕೀಟ, ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನು ಹೀರುವ ಬಾವಲಿ ಕೂಡ ಇದೆ…!
ನೆತ್ತರು ಬಾವಲಿಗಳು (vampire bats) ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಮಾತ್ರ ಕಂಡುಬರುತ್ತವೆ. ಈ ಬಾವಲಿಗಳು ರೆಕ್ಕೆ ಬಿಚ್ಚಿದಾಗ ಅದರ ಉದ್ದ ಸುಮಾರು 30 ಸೆಂ.ಮೀ. ಹಾಗೂ ದೇಹ 10 ಸೆಂ.ಮೀ. ನಷ್ಟಿರುತ್ತದೆ.
ನೆತ್ತರು ಬಾವಲಿಯ ಮುಂದಿನ ಹಲ್ಲು ಸೂಜಿಯಷ್ಟು ಮೊನಚಾಗಿರುತ್ತದೆ. ಇದರ ಸಹಾಯದಿಂದಲೇ ಇದು ಚರ್ಮವನ್ನು ಕೊರೆದು ರಕ್ತಹೀರುತ್ತದೆ. ಮನುಷ್ಯ, ಕುದುರೆ, ಹಸು, ನಾಯಿ, ಆಡು, ಕೋಳಿ ಇತ್ಯಾದಿ ಪ್ರಾಣಿಗಳು ನಿದ್ರಿಸುತ್ತಿರುವಾಗ ಚರ್ಮವನ್ನು ನೆಕ್ಕಿ ನಂತರ ಚರ್ಮವನ್ನು ಪ್ರಾಣಿಗಳಿಗೆ ಗೊತ್ತಾಗದಷ್ಟು ನಯವಾಗಿ ನೋವಾಗದಂತೆ ಕೊರೆಯುತ್ತದೆ. ಚರ್ಮವನ್ನು ಕೊರೆದ ನಂತರ ಕೊಳವೆಯಂತಿರುವ ನಾಲಗೆಯಿಂದ ರಕ್ತವನ್ನು ಹೀರುತ್ತದೆ.
ನೆತ್ತರು ಬಾವಲಿಗೆ ಒಂದು ರಾತ್ರಿಗೆ ಸುಮಾರು 30 ಗ್ರಾಂ ನಷ್ಟು ರಕ್ತ ಬೇಕಾಗುತ್ತದೆ. ಇದು ಮನುಷ್ಯನ ರಕ್ತವನ್ನು ಹೀರುವುದು ತೀರಾ ವಿರಳ. ಹಾಗೊಮ್ಮೆ ಇದು ಕಚ್ಚಿದರೆ ಅದರಿಂದ ರೆಬಿಸ್ ರೋಗ ಹರಡುತ್ತದೆ.