ಕಾಲೇಜು ವಾರ್ಷಿಕೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ವಿಶೇಷ ವಿನ್ಯಾಸದ ಉಡುಗೆಯು ಟ್ವಿಟ್ಟರ್ ನಲ್ಲಿ ದರ್ಶನ ಕೊಟ್ಟು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೆರಿಕಾದ ಪೇಟಾನ್ ಮ್ಯಾಂಕರ್ ಎಂಬಾಕೆ ನಾಲ್ಕು ತಿಂಗಳ ಹಿಂದೆ ಕಾಲೇಜಿನಲ್ಲಿ ನಡೆಯಬೇಕಿದ್ದ ಸಮಾರಂಭದಲ್ಲಿ ಪ್ರದರ್ಶಿಸುವ ಸಲುವಾಗಿ ಕೊರೊನಾ ಮತ್ತು ಇತಿಹಾಸದ ಪುಟಗಳನ್ನ ತೆರೆದಿಡುವ ಮಾದರಿಯ ವಿಶೇಷ ಉಡುಗೆಯನ್ನು ಸಿದ್ಧಪಡಿಸಿದ್ದಳು.
ಇದಕ್ಕಾಗಿ ಭಾರೀ ಕಸೂತಿಯ ಕಸರತ್ತು ಕೂಡ ನಡೆಸಿದ್ದಳು. ಇಡೀ ಉಡುಗೆಯ ಮೇಲಿದ್ದ ಥೀಮ್ ಜನರಿಗೆ ಅರ್ಥವಾಗುವಂತೆಯೂ ಇತ್ತು. ಆದರೆ, ಕೊರೊನಾದಿಂದಾಗಿ ಕಾರ್ಯಕ್ರಮವೇ ರದ್ದಾಯಿತು.
ಆದರೂ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಆಕೆಯ ಉತ್ಕಟತೆ ಮಾತ್ರ ಕಡಿಮೆ ಆಗಿರಲಿಲ್ಲ. ಇದನ್ನರಿತ ತಾಯಿ ಸುಜಿ ಸ್ಮಿತ್ ಮ್ಯಾಂಕರ್, ಆ ಉಡುಗೆಯನ್ನ ಆಕೆಗೆ ತೊಡಿಸಿ, ರ್ಯಾಂಪ್ ವಾಕ್ ಮಾಡಿಸಿ, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಮಗಳ ಕುಶಲತೆ ಮೇಲೆ ಅನುಮಾನವಿರಲಿಲ್ಲ. ಸ್ಪರ್ಧೆಯಲ್ಲಿ ಆಕೆ ಸ್ಪರ್ಧಿಸಬೇಕಿತ್ತಷ್ಟೆ. ಬಹುಮಾನ ಅವಳಿಗೇ ಬರುವುದಿತ್ತು. ಅಷ್ಟು ಚೆನ್ನಾಗಿ ಸಿದ್ಧಪಡಿಸಿದ್ದಳು. ಆದರೆ, ಕೊರೊನಾದಿಂದಾಗಿ ಕಾರ್ಯಕ್ರಮ ರದ್ದಾದ್ದರಿಂದ ಪ್ರದರ್ಶನ ಸಾಧ್ಯವಾಗಿಲ್ಲ. ಆದರೇನಂತೆ ? ವೈಶಿಷ್ಟ್ಯ ನೋಡಿ, ನಳಿಕೆಯಾಕಾರದ ಉಡುಗೆ ಮೇಲೆ ಇತಿಹಾಸವನ್ನು ಚಿತ್ರಿಸಲಾಗಿದೆ ಎಂದು ಮಗಳನ್ನ ಪ್ರೋತ್ಸಾಹಿಸುವ ಸಲುವಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಾಯಿ-ಮಗಳ ಪ್ರೀತಿ ಮತ್ತು ಉಡುಗೊರೆಯ ವಿಶೇಷತೆಗೆ ನೆಟ್ಟಿಗರೂ ಫಿದಾ ಆಗಿದ್ದಾರೆ.