ನ್ಯೂಯಾರ್ಕ್: ಕೊರೊನಾ ಸೋಂಕು ತಗುಲಬಾರದೆಂದು ಮುಂಜಾಗೃತಾ ಕ್ರಮವಾಗಿ ಫೈಝರ್ ಲಸಿಕೆ ಹಾಕಿಸಿಕೊಂಡಿದ್ದ ನರ್ಸ್ ಒಬ್ಬರಿಗೆ ಲಸಿಕೆ ಹಾಕಿಸಿಕೊಂಡ ಒಂದೇ ವಾರದಲ್ಲಿ ಸೋಂಕು ದೃಢಪಟ್ಟಿದೆ.
ಕ್ಯಾಲಿಫೋರ್ನಿಯಾದ ನರ್ಸ್ ಮ್ಯಾಥ್ಯೂ ಡಬ್ಲ್ಯೂ ಕೆಲ ದಿನಗಳ ಹಿಂದೆ ಫೈಝರ್ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆ ಹಾಕಿಸಿಕೊಂಡ ಬಳಿಕ ಯಾವುದೇ ಸೈಡ್ ಇಫೆಕ್ಟ್ ಕೂಡ ಕಂಡು ಬಂದಿರಲಿಲ್ಲ. ಆದರೆ ಇದೀಗ 6 ದಿನಗಳ ಬಳಿಕ ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಟೆಸ್ಟ್ ಮಾಡಿಸಿಕೊಂಡಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕು ಪತ್ತೆಯಾಗಿರುವುದು ಅಪಾಯಕಾರಿಯಲ್ಲ. ಲಸಿಕೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು 14 ದಿನಗಳು ಬೇಕು. ಮೊದಲ ಡೋಸ್ ನಲ್ಲಿ ಶೇ.50ರಷ್ಟು ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಲು ಎರಡನೇ ಡೋಸ್ ಅಗತ್ಯ ಎಂದು ಹೇಳಿದ್ದಾರೆ.