ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್ ವಿವಿಯಲ್ಲಿ ಪ್ರವೇಶ ಪಡೆಯಲು ಈತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತನ್ನ ಎಂಟನೇ ವಯಸ್ಸಿನಲ್ಲಿ ತಂದೆ-ತಾಯಿಯಿಂದ ದೂರಾದ ರೆಹಾನ್ ಸ್ಟೆಟಾನ್ ಎಂಬಾತ, ಕಾಲೇಜು ಜೀವನ ಮುಗಿಯುವವರೆಗೆ ತನ್ನ ದುಡಿಮೆ ತಾನೇ ಮಾಡಿ, ಶುಲ್ಕ ಭರಿಸಿ ವ್ಯಾಸಂಗ ಮಾಡಿದ.
ಬಾಕ್ಸಿಂಗ್ ಸೇರಿದ್ದ ರೆಹಾನ್ ತೋಳಿಗೆ ಪೆಟ್ಟಾದ ನಂತರ ಕಾಲೇಜು, ದುಡಿಮೆಗೆ ಕೊಂಚ ಕಡಿವಾಣ ಬಿದ್ದಿತ್ತು. ಆತನಿಗೆ ಆಗ 18 ವಯಸ್ಸು. ಪದವಿ ಶಿಕ್ಷಣ ಮುಗಿಸಿದ್ದ ರೆಹಾನ್, ಹಾರ್ವರ್ಡ್ ವಿವಿಯಲ್ಲಿ ಕಾನೂನು ಪದವಿ ಉನ್ನತ ವ್ಯಾಸಂಗದ ಕನಸು ಹೊತ್ತಿದ್ದ.
ಹಾರ್ವರ್ಡ್ ವಿವಿಯ ಪ್ರವೇಶ ಬಯಸಿದ ರೆಹಾನ್ ಗೆ ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಕೊನೆಗೆ ಸ್ಥಳೀಯ ಆಡಳಿತದಲ್ಲಿ ತ್ಯಾಜ್ಯ ವಿಲೇವಾರಿ ಕೆಲಸ ಪಡೆದು, ಮುಂಜಾನೆ 4 ಗಂಟೆಯಿಂದ ಕಸ ಎತ್ತುವ ಕಾಯಕ ಮಾಡಿ ದುಡಿದ ಹಣದಲ್ಲಿ ಶುಲ್ಕ ಪಾವತಿಸಿದ್ದಾನೆ. ಕೊನೆಗೂ ಪ್ರವೇಶಾತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾನೆ. ಯುವಕನ ಸಾಧನೆ ಈಗ ಟ್ವಿಟ್ಟರ್ ಮೂಲಕ ಜಗತ್ತಿಗೆ ಗೊತ್ತಾಗಿದ್ದು, ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.