ಬರೋಬ್ಬರಿ 100 ವರ್ಷಕ್ಕೂ ಹಳೆಯದಾದ ಸ್ಟರ್ಜನ್ ಜಾತಿ ಮೀನನ್ನ ಡೆಟ್ರಾಯಿಟ್ ನದಿಯಿಂದ ಅಮೆರಿಕ ಮೀನು ಹಾಗೂ ವನ್ಯಜೀವಿ ಸರ್ವೀಸ್ ಸೆರೆ ಹಿಡಿದಿದೆ.
ಈ ಮೀನು ಬರೋಬ್ಬರಿ 108.8 ಕೆಜಿ ತೂಕ ಹೊಂದಿದೆ. ಮಾತ್ರವಲ್ಲದೇ ಈ ಮೀನು ಸುಮಾರು 7 ಅಡಿ ಉದ್ದವಿದೆ ಎಂದು ವರದಿಯಾಗಿದೆ. ಮೀನಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದರ ದೇಹ ಹಾಗೂ ಗಾತ್ರವನ್ನ ನೋಡಿ ಈ ಮೀನು ಹೆಣ್ಣಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಮೀನು ಬರೋಬ್ಬರಿ 100 ವರ್ಷಗಳಿಂದ ಇಲ್ಲಿ ಸಂಚರಿಸುತ್ತಿತ್ತು. ಈ ಮೀನನ್ನ ಅಳತೆ ಮಾಡಿದ ಬಳಿಕ ಕೂಡಲೇ ನೀರಿನಲ್ಲಿ ಬಿಡಲಾಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಈ ಜಾತಿಯ ಗಂಡು ಮೀನುಗಳ ಆಯಸ್ಸು ಸರಾಸರಿ 55 ವರ್ಷ ಹಾಗೂ ಹೆಣ್ಣು ಮೀನು 70 ರಿಂದ 100 ವರ್ಷಗಳ ಕಾಲ ಬದುಕುತ್ತವೆ.
ಆಕೆಗೆ ತುಂಬಾ ಆಯಾಸವಾಗಿತ್ತು. ಹಾಗಾಗಿ ಈ ಹೆಣ್ಣು ಮೀನು ನಮ್ಮೊಂದಿಗೆ ಹೆಚ್ಚು ಹೊತ್ತು ಸೆಣೆಸಲಿಲ್ಲ ಎಂದು ಮೀನುಗಾರರೊಬ್ಬರು ಹೇಳಿದ್ದಾರೆ.
ನದಿಯಲ್ಲಿ ಸಿಗುವ ಈ ಸ್ಟರ್ಜನ್ ಮೀನುಗಳು ಅಪರೂಪದ ಪ್ರಭೇದಗಳ ಸ್ಥಾನದಲ್ಲಿ ಗುರುತಿಸಿಕೊಂಡಿವೆ. ಮಿಚಿಗನ್ನ ಕೆಲ ಆಯ್ದ ಭಾಗದಲ್ಲಿ ಮಾತ್ರ ಮೀನುಗಾರರು ವರ್ಷಕ್ಕೆ ಒಂದು ಸ್ಟರ್ಜನ್ನ್ನು ಗಾಳಕ್ಕೆ ಬೀಳಿಸಬಹುದು. ಈ ಗಾಳಕ್ಕೆ ಬಿದ್ದ ಮೀನಿಗೂ ಒಂದು ನಿರ್ದಿಷ್ಟ ಗಾತ್ರವನ್ನ ನಿಗದಿ ಮಾಡಲಾಗಿದೆ. ಆದರೆ ಡೆಟ್ರಾಯಿಟ್ ನದಿಯಲ್ಲಿ ಸೆರೆ ಹಿಡಿದ ಪ್ರತಿಯೊಂದು ಸ್ಟರ್ಜನ್ ಮೀನನ್ನು ಜೀವಂತವಾಗಿ ವಾಪಸ್ ನದಿಗೇ ಬಿಡಬೇಕೆಂಬ ನಿಯಮವಿದೆ.